ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಹಾಧನ್ವಂತರಿ ಯಾಗ ಸಮಿತಿ ನೂತನ ಕಾರ್ಯಾಲಯ ಉದ್ಘಾಟಿಸಿದರು.  
ಉಡುಪಿ

ಮಹಾಧನ್ವಂತರಿ ಯಾಗ ಕಾರ್ಯಾಲಯ ಉದ್ಘಾಟನೆ

ಉಡುಪಿ: ಶ್ರೀಮದ್ಭಾಗವತದಲ್ಲಿ ಬರುವ ನಾರಾಯಣ ವರ್ಮದಲ್ಲಿ ಧನ್ವಂತರೇ ಭಗವಾನ್​ ಪಾತು ಅಪಥ್ಯಾತ್​ ಎಂದು ಪ್ರಾರ್ಥಿಸಲಾಗಿದೆ. ಅಪಥ್ಯ ಆಹಾರಗಳಿಂದ ಬರುವ ರೋಗಗಳಿಂದ ಧನ್ವಂತರಿ ನಮ್ಮನ್ನು ರಕ್ಷಿಸುತ್ತಾನೆ. ಅಪಥ್ಯ ಆಹಾರ ಸೇವನೆ ಹಾಗೂ ಜೀವನಶೈಲಿಯಿಂದ ಅನೇಕ ರೀತಿಯ ರೋಗಗಳು ಬರುತ್ತವೆ. ಇಂಥ ಸಂದರ್ಭದಲ್ಲಿ ಧನ್ವಂತರಿ ಯಾಗದ ಮೂಲಕ ಪಥ್ಯವಾದ ಆಹಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡುವಂತಾಗಲಿ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸನಾತನ ಸಂಸ್ಥೆಯ ವತಿಯಿಂದ ನ.29ರಂದು ಆಯೋಜಿಸಲಾಗುತ್ತಿರುವ ಶ್ರೀ ಮಹಾಧನ್ವಂತರಿ ಯಾಗ ಪ್ರಚಾರ ಸಮಿತಿ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಅವರು ಅಶೀರ್ವಚನ ನೀಡಿದರು.

ಅಪಥ್ಯವನ್ನು ಸ್ವೀಕರಿಸದೇ ಇರುವುದು ರೋಗ ಬರದಂತೆ ತಡೆಯಲು ಉತ್ತಮ ದಾರಿ. ಯಾವುದೇ ಕಾರ್ಯದ ಯಶಸ್ಸಿಗೆ ದೇವರ ಅನುಗ್ರಹ ಎಷ್ಟು ಮುಖ್ಯವೋ, ನಮ್ಮ ಪ್ರಯತ್ನವೂ ಅಷ್ಟೇ ಮುಖ್ಯವಾಗಿದೆ ಎಂದರು.

ಆಯೋಜನ ಸಮಿತಿಯ ಸಂಚಾಲಕ ಗುರುಪ್ರಸಾದ್​ ಗೌಡ, ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್​ ನಾಯಕ್​ ಮೊದಲಾದವರು ಉಪಸ್ಥಿತರಿದ್ದರು. ಪ್ರಜ್ಞಾ ರಾವ್​ ಕಾರ್ಯಕ್ರಮ ನಿರೂಪಿಸಿದರು.