ಆಯೋಜನಾ ಸಮಿತಿ ಸಂಚಾಲಕ ಗುರುಪ್ರಸಾದ್​ ಗೌಡ ಮಾತನಾಡಿದರು. 
ಉಡುಪಿ

ನ. 29 ರಂದು ಮಹಾಧನ್ವಂತರಿ ಯಾಗ

ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಸಮಸ್ತ ಸಮಾಜದ ಆರೋಗ್ಯ, ಕ್ಷೇಮ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ನ. 29 ರಂದು ಉಡುಪಿಯ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್​ ಮಹಾಧನ್ವಂತರಿ ಯಾಗ ಆಯೋಜಿಸಲಾಗಿದೆ. ಈ ಮಹಾಯಾಗದಲ್ಲಿ ಪಾಲ್ಗೊಳ್ಳಲು ಈಗಾಗಲೇ 9,000 ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದು, ಸುಮಾರು 15,000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಯಶ್​ಪಾಲ್​ ಸುವರ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉಡುಪಿಯ ಎಲ್ಲಾ ಮಠಾಧೀಶರು, ಧಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು, ಭಜನಾ ಹಾಗೂ ಮಹಿಳಾ ಮಂಡಳಿಗಳು, ವೈದ್ಯರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಉದ್ಯಮಿಗಳಿಗೆ ಆಮಂತ್ರಣ ನೀಡಲಾಗಿದೆ. ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಸಹಕಾರ ಕೋರಲಾಗಿದೆ. ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಬೃಹತ್​ ಜರ್ಮನ್​ ಹ್ಯಾಂಗರ್​ ಮಾದರಿಯ ಪೆಂಡಾಲ್​ ನಿಮಾರ್ಣ ಭರದಿಂದ ಸಾಗುತ್ತಿದೆ. ಯಾಗ ಮಂಟಪ, ವೇದಿಕೆ, ಧರ್ಮಪ್ರದರ್ಶನ ಮಳಿಗೆಗಳ ಜೊತೆಗೆ ಹೊರ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳಿಗೂ ಅನುಕೂಲವಾಗುವಂತೆ ವಾಹನ ಪಾರ್ಕಿಂಗ್​, ಸುಗಮ ಸಂಚಾರ, ಪ್ರವೇಶ-ನಿರ್ಗಮನ ಮಾರ್ಗಗಳು, ಸ್ವಯಂಸೇವಕರ ನಿಯೋಜನೆ, ಆಸನ, ಕುಡಿಯುವ ನೀರು ಹಾಗೂ ಸ್ವಚ್ಛತೆಯ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಆಯೋಜನಾ ಸಮಿತಿ ಸಂಚಾಲಕ ಗುರುಪ್ರಸಾದ್​ ಗೌಡ ಮಾತನಾಡಿ, ಚಂದ್ರ ದೇವತೆಯಿಂದ ಸ್ಥಾಪಿತವಾಗಿ 1000 ವರ್ಷಗಳಿಂದ ಸಂರಕ್ಷಿಸಲಾದ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ಸುರೇಶ್​ ನಾಯಕ್​ ಕುಯಿಲಾಡಿ, ಸಂಘಟನಾ ಕಾರ್ಯದರ್ಶಿ ವಿಜಯ್​ ಕೊಡವೂರು, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ರಮಾನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ವಕ್ತಾರ ರಮೇಶ ಶಿಂದೆ ಉಪಸ್ಥಿತರಿದ್ದರು.