ಉಡುಪಿ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಭಾಗವತ ಪಾರಾಯಣ ಯಜ್ಞ ನಡೆಸಿದ ದೇಶದ ವಿವಿಧ ಪಂಡಿತರನ್ನು ವಿದ್ಯೇಶ ತೀರ್ಥರು ಸನ್ಮಾನಿಸಿದರು. ಶ್ರೀನಿವಾಸ ವರಖೇಡಿ, ಡಾ. ಎ. ಶ್ರೀನಿವಾಸ ರಾವ್​, ಪ್ರಹ್ಲಾದ ಆಚಾರ್ಯ ಜೋಷಿ, ಕೃಷ್ಣ ಆಚಾರ್ಯ ನಾಗಸಂಪಿಗೆ, ಶ್ರೀನಿಧಿ ಆಚಾರ್ಯ ಪ್ಯಾಟಿ ಇತರರು ಇದ್ದರು. 
ಉಡುಪಿ

ಉತ್ತರ ಭಾರತದಲ್ಲೂ ಮಾಧ್ವ ತತ್ವ, ಜ್ಞಾನ ಪ್ರಸಾರ

* ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಭರವಸೆ

* ಭಂಡಾರಕೇರಿ ಶ್ರೀಗಳ ಚಾತುರ್ಮಾಸ್ಯದಲ್ಲಿ ವಿದ್ವಾಂಸರಿಗೆ ಸನ್ಮಾನ

ಉಡುಪಿ: ಕುಗ್ರಾಮವಾದ ಭಂಡಾರಕೇರಿಯಲ್ಲಿ ಚಾತುರ್ಮಾಸ್ಯ ವ್ರತ ಸ್ವೀಕರಿಸಿ ದೇಶದ ಹಲವು ಭಾಗದ ಖ್ಯಾತ ಪಂಡಿತರನ್ನು ಆಹ್ವಾನಿಸಿರುವುದು ನಿಜಕ್ಕೂ ಸಾಧನೆ. ತಲಾ 9 ದಿನ ವೇದ, ತಾತ್ಪರ್ಯ ನಿರ್ಣಯ, ಭಾಗವತ ಗ್ರಂಥಗಳ ಪಾರಾಯಣ ನಡೆಸಿರುವುದು ಚಾತುರ್ಮಾಸ್ಯ ಪರಂಪರೆಗೆ ಮಾದರಿ. ಉತ್ತರ ಭಾರತದಲ್ಲೂ ಮಾಧ್ವ ತತ್ವ, ಜ್ಞಾನ ಪ್ರಸಾರ ಮಾಡಲು ಭಂಡಾರಕೇರಿ ಶ್ರೀಗಳಿಗೆ ಬೆಂಬಲ ನೀಡಲಾಗುವುದು ಎಂದು ದೆಹಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಭರವಸೆ ನೀಡಿದರು.

ಉಡುಪಿ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಶನಿವಾರ (ಸೆ.26) ಆಯೋಜಿಸಿದ್ದ ಶ್ರೀ ವಿದ್ಯಾಮಾನ್ಯ ತೀರ್ಥರ ಪೀಠಾರೋಹಣ ಶತಮಾನೋತ್ಸವ, ವಿದ್ಯೇಶ ತೀರ್ಥ ಶ್ರೀಪಾದರ 47ನೇ ಚಾತುರ್ಮಾಸ್ಯ ಸಮಾಪ್ತಿ, ಭಾಗವತ ಪಾರಾಯಣ ಸಮರ್ಪಣೆ ಹಾಗೂ ವಿದ್ವಾಂಸರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಎಲ್ಲೆಡೆ ಕೃಷ್ಣಭಕ್ತಿ ಪ್ರಸಾರ

ವಿದ್ಯೇಶ ತೀರ್ಥ ಶ್ರೀಪಾದರು ಸಂದೇಶ ನೀಡಿ, ಆಚಾರ್ಯ ಮಧ್ವರ ಸಿದ್ಧಾಂತದ ಬಗ್ಗೆ ಹೆಚ್ಚು ಪ್ರಚಾರ ಇರಲಿಲ್ಲ. ಅಂತಹ ಕಾಲದಲ್ಲಿ ನಮ್ಮ ಇಬ್ಬರು ಗುರುಗಳಾದ ವಿದ್ಯಾಮಾನ್ಯರು ಮತ್ತು ಪೇಜಾವರದ ವಿಶ್ವೇಶ ತೀರ್ಥರು ಉತ್ತರ ಭಾರತದಲ್ಲೂ ಮಧ್ವರ ತತ್ವಜ್ಞಾನ ಪ್ರಸಾರಗೊಳಿಸಿ ಗ್ರಂಥಗಳ ಅಮೂಲ್ಯತೆ ತೋರಿಸಿಕೊಟ್ಟರು. ಅವರಿಬ್ಬರ ಆಶಯದಂತೆ ಉತ್ತರ ಭಾರತದಲ್ಲಿ ಕೃಷ್ಣ ಭಕ್ತಿಯನ್ನು ಇನ್ನಷ್ಟು ಪಸರಿಸಲು ನಾವೂ ಸಂಕಲ್ಪ ಮಾಡಿದ್ದೇವೆ ಎಂದರು.

ಶ್ರೀಗಳ ಅನನ್ಯ ಕಳಕಳಿ

ಮಂಗಳೂರಿನ ಶ್ರೀನಿವಾಸ ವಿವಿ ಕುಲಪತಿ ಡಾ. ಎ. ಶ್ರೀನಿವಾಸ ರಾವ್​ ಮಾತನಾಡಿ, ಭಂಡಾರಕೇರಿ ಶ್ರೀಗಳು ಪಾರಂಪರಿಕ ಪದ್ಧತಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ವೇದ, ಶಾಸ್ತ್ರ ಮತ್ತು ಪಾರಾಯಣ ಉಳಿಸುವ, ಪಂಡಿತರನ್ನು ಪ್ರೋತ್ಸಾಹಿಸುವ ಅವರ ಕಳಕಳಿ ಶ್ರೇಷ್ಠವಾಗಿದೆ ಎಂದರು.

ಸಾಮೂಹಿಕ ಗಾಯನ

ಬೆಂಗಳೂರಿನ ಪ್ರಖ್ಯಾತ ವಿದುಷಿ ಶುಭಾ ಸಂತೋಷ್​ ನೇತೃತ್ವದಲ್ಲಿ 100 ಕಲಾವಿದರಿಂದ ವಿದ್ಯಾಮಾನ್ಯರು ಮತ್ತು ವಿದ್ಯೇಶ ತೀರ್ಥರು ರಚಿಸಿದ ಕೃತಿಗಳ ಸಾಮೂಹಿಕ ಗಾಯನ ಸೇವೆ ನಡೆಯಿತು. ಉಡುಪಿಯ ಖ್ಯಾತ ಕಲಾವಿದೆ ವಿದುಷಿ ಡಾ. ಉಷಾ ಹೆಬ್ಬಾರ್​ ಮತ್ತು ತಂಡದವರು ಸಹಕರಿಸಿದರು.

ಪಾರಾಯಣ ಸಮರ್ಪಣೆ, ಸನ್ಮಾನ

ಪಂಡಿತರಾದ ರಘುಪತಿ ಉಪಾಧ್ಯಾಯ, ನಾಗರಾಜ್​ ಆಚಾರ್ಯ, ಕೃಷ್ಣಾಚಾರ್ಯ ಉಪಾಧ್ಯಾಯ, ಪ್ರಹ್ಲಾದ ಆಚಾರ್ಯ ಜೋಷಿ, ಶ್ರೀಕಾಂತ ಬಾಯರಿ, ಸುಧೀಂದ್ರ ಆಚಾರ್ಯ, ಶ್ರೀನಿವಾಸ ಆಚಾರ್ಯ ಹೊನ್ನೀದಿಬ್ಬ, ಶ್ರೀನಿಧಿ ಗಣಾಚಾರಿ, ಶ್ರೀನಿಧಿ ಆಚಾರ್ಯ ಪ್ಯಾಟಿ, ಕೃಷ್ಣಾಚಾರ್ಯ ನಾಗಸಂಪಿಗೆ, ಲಕ್ಷ್ಮೀಕಾಂತ ಆಚಾರ್ಯ, ಆದ್ಯ ಸುದರ್ಶನಾಚಾರ್ಯ, ವಸುಧೇಂದ್ರ ಆಚಾರ್ಯ, ರಘೂತ್ತಮ ಆಚಾರ್ಯ, ಶ್ರೀಕಾಂತ ಆಚಾರ್ಯ ಬಾಳ್ತಿಲ್ಲಾಯ, ಶ್ರೀನಿವಾಸ ಭಟ್ಟ ಇವರು 9 ದಿನ ನಡೆಸಿದ ಭಾಗವತ ಪಾರಾಯಣವನ್ನು ದೇವರಿಗೆ ಸಮರ್ಪಿಸಲಾಯಿತು. ಪಾರಾಯಣ ಮಾಡಿದ 16 ವಿದ್ವಾಂಸರನ್ನು ಸನ್ಮಾನಿಸಲಾಯತು.