ಉಡುಪಿಯಲ್ಲಿ ಆಯೋಜಿಸಿದ್ದ ಮಧುಮಾಸದ ಸಂಜೆ ಸಂಗೀತ ಕಾರ್ಯಕ್ರಮವನ್ನು ಎಂ.ನಾರಾಯಣ ಹೆಗಡೆ ಉದ್ಘಾಟಿಸಿದರು. ಪ್ರೊ. ಎಂ.ಎಲ್. ಸಾಮಗ, ಸತೀಶ್ ಕುಮಾರ್ ಕೆಮ್ಮಣ್ಣು, ತುಳಸೀದಾಸ್ ಇದ್ದರು.
* ಐವೈಸಿ ಸಭಾಂಗಣದಲ್ಲಿ ಸಂಗೀತ, ಸಾಹಿತ್ಯ ಪರ್ವ
ಉಡುಪಿ: ಕರ್ನಾಟಕ ಗಮಕ ಕಲಾ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ಅಭಿಜ್ಞಾನ ಕಲಾಧಾಮ ಸಹಯೋಗದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣದಲ್ಲಿ ಇತ್ತೀಚೆಗೆ ಮಧುಮಾಸದ ಸಂಜೆ (ಸಾಹಿತ್ಯ, ಸಂಗೀತ, ಭಾವಪರ್ವ) ಕಾರ್ಯಕ್ರಮ ನಡೆಯಿತು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಂ.ನಾರಾಯಣ ಹೆಗಡೆ ಉದ್ಘಾಟಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕೆಮ್ಮಣ್ಣು, ಅಭಿಜ್ಞಾನ ಕಲಾಧಾಮದ ತುಳಸೀದಾಸ್ ಉಪಸ್ಥಿತರಿದ್ದರು.
ಸಂಗೀತ ಕಾರ್ಯಕ್ರಮ
ವಿದ್ವಾನ್ ನಟರಾಜ್ ಎಚ್.ಎನ್. ಅವರು ಕೆ.ಎಸ್. ನರಸಿಂಹಸ್ವಾಮಿ ರಚಿತ ಕವಿತೆ ಸಹಿತ 'ವಸಂತ ಗೀತೆ'ಗಳನ್ನು ಸುಶ್ರಾವ್ಯವಾಗಿ ಹಾಡಿದರು. ಶರತ್ ಕುಮಾರ್ ನಾಡ ಹಿಂದೂಸ್ಥಾನಿ ಸಂಗೀತದಲ್ಲಿ ರಾಗ್ ಮಧುವಂತಿಯಿಂದ ಆರಂಭಿಸಿ ವಿವಿಧ ಭಜನೆ ಪ್ರಸ್ತುತಪಡಿಸಿದರು. ಹಾಮೋರ್ನಿಯಂನಲ್ಲಿ ಪ್ರಣಾದ್ ರಾವ್, ತಬಲಾದಲ್ಲಿ ಶಶಿಕಿರಣ್ ಮಣಿಪಾಲ ಸಾಥ್ ನೀಡಿದರು.
ಸಾಹಿತ್ಯ ಪರ್ವ
ಪಲ್ಲವಿ ಕೆದ್ಲಾಯ ಅವರು 'ಶ್ರೀರಾಮ ನಿರ್ಯಾಣ'ದ ಗಮಕ ವಾಚನ ಹಾಗೂ ಡಾ.ರಾಘವೇಂದ್ರ ರಾವ್ ವ್ಯಾಖ್ಯಾನ ಮಾಡಿದರು. ಸಂಗೀತ ಕ್ಷೇತ್ರದ ಸಾಧಕರಾದ ತುಳಸೀದಾಸ್, ಗಮಕ ಕಲಾವಿದೆ ಉಮಾ ಮಂಜುನಾಥ್, ಹಿಂದೂಸ್ಥಾನಿ ಉದಯೋನ್ಮುಖ ಕಲಾವಿದ ಶರತ್ ಕುಮಾರ್ ನಾಡ ಅವರನ್ನು ಗೌರವಿಸಲಾಯಿತು.
ಜಾಹ್ನವಿ ಪ್ರಾರ್ಥಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ ಸ್ವಾಗತಿಸಿದರು. ಸಂಸ್ಕೃತಿ ಪ್ರಭಾಕರ್, ಸಂಹಿತಾ ಜಿ.ಪಿ. ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಕುಮಾರ್ ವಂದಿಸಿದರು.