ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.  
ಉಡುಪಿ

ಮಡಗಾಂವ್-ಮಂಗಳೂರು ವಂದೇ ಭಾರತ್​ ಬೆಂಗಳೂರಿಗೆ ವಿಸ್ತರಣೆ

ಕರಾವಳಿ ಜನರ ಸುದೀರ್ಘಕಾಲದ ಬೇಡಿಕೆಗೆ ರೈಲ್ವೇ ಇಲಾಖೆ ಸ್ಪಂದಿಸಿದ್ದು, ಮಂಗಳೂರು-ಮಡಗಾಂವ್​ ವಂದೇ ಭಾರತ್​ ಸಂಚಾರವನ್ನು ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ: ಕರಾವಳಿ ಜನರ ಸುದೀರ್ಘಕಾಲದ ಬೇಡಿಕೆಗೆ ರೈಲ್ವೇ ಇಲಾಖೆ ಸ್ಪಂದಿಸಿದ್ದು, ಮಂಗಳೂರು&ಮಡಗಾಂವ್​ ವಂದೇ ಭಾರತ್​ ಸಂಚಾರವನ್ನು ಬೆಂಗಳೂರಿನವರೆಗೆ ವಿಸ್ತರಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಬೆಂಗಳೂರು-&ಮಂಗಳೂರು- ವಂದೇ ಭಾರತ್​ ರೈಲು ಉಡುಪಿ-&ಕುಂದಾಪುರ ಮಾರ್ಗವಾಗಿ ಕಾರವಾರ- ಮಡಗಾಂವ್​ವರೆಗೆ ಸಂಚರಿಸಲಿದೆ. ಕರಾವಳಿ ಜಿಲ್ಲೆಗಳ ಜನತೆಯನ್ನು ವಂದೇ ಭಾರತ ಮೂಲಕ ರಾಜಧಾನಿ ಬೆಂಗಳೂರಿಗೆ ಜೋಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್​ ಈ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಕರಾವಳಿ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿದಂತಾಗಿದೆ. ಮುಂದಿನ ದಿನಗಳಲ್ಲಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ, ಕರಾವಳಿ ಜನತೆಗೆ ಅತ್ಯುತ್ತಮ ರೈಲ್ವೆ ಸೇವೆ ಒದಗಿಸುವುದು ನಮ್ಮ ಗುರಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೈಂದೂರಿನಲ್ಲಿಯೂ ನಿಲುಗಡೆ

ಮಂಗಳೂರು-ಮಡಗಾಂವ್​ ವಂದೇ ಭಾರತ್​ ರೈಲು ಬೆಂಗಳೂರಿನವರೆಗೆ ವಿಸ್ತರಣೆಯಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಕೋರಿಕೆ ಮೇರೆಗೆ ಬೈಂದೂರಿನಲ್ಲಿ ಮೂಕಾಂಬಿಕಾ ರೋಡ್​ ನಿಲ್ದಾಣದಲ್ಲಿ ವಂದೇ ಭಾರತ್​ ರೈಲು ನಿಲುಗಡೆಯಾಗಲಿದೆ. ಇದರಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬೈಂದೂರಿನ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ.

3 ಜಿಲ್ಲೆ ಪ್ರಯಾಣಿಕರಿಗೆ ಅನುಕೂಲ

ಮಂಗಳೂರು-ಮಡಗಾಂವ್​ ರೈಲು ಬೆಂಗಳೂರಿಗೆ ವಿಸ್ತರಣೆಯಾಗಿರುವುದರಿಂದ ಉತ್ತರಕನ್ನಡ, ಉಡುಪಿ, ದ.ಕ. ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ನಿತ್ಯ ಸಂಚರಿಸುವ ರೈಲಿನಲ್ಲಿ ಅಧಿಕ ಸಮಯ ತಗುಲುತ್ತಿದ್ದರಿಂದ ಹೆಚ್ಚಿನ ಜನರು ಬಸ್​ಗಳನ್ನು ಮಾತ್ರ ಆಶ್ರಯಿಸುತ್ತಿದ್ದರು. ಇದೀಗ ವಂದೇ ಭಾರತ್​ ರೈಲು ಬಸ್​ ಪ್ರಯಾಣ ಸಮಯಕ್ಕಿಂತಲೂ ಕಡಿಮೆ ಅವಧಿಯಲ್ಲಿ ಬೆಂಗಳೂರು ತಲುಪಲಿದೆ. ಇದರಿಂದ ಹಬ್ಬದ ಸಂದರ್ಭದಲ್ಲಿ ಊರಿಗೆ ಬರಲು ತವಕಿಸುತ್ತಾ ಬಸ್​ ದರ ನೋಡಿ ಕಂಗಾಲಾಗುತ್ತಿದ್ದ ಪ್ರಯಾಣಿಕರು ನಿರಾಳರಾಗಿದ್ದಾರೆ.