ಉಡುಪಿಯಲ್ಲಿ ತುಳುಕೂಟ ಆಯೋಜಿಸಿದ್ದ 'ಮದರೆಂಗಿದ ರಂಗ್​' ಕಾರ್ಯಕ್ರಮವನ್ನು ಅತಿಥಿ ಶೋಭಾ ಅವರಿಗೆ ಮದರಂಗಿ ಹಚ್ಚುವ ಮೂಲಕ ಜಯಲಕ್ಷ್ಮೀ ಅಮೀನ್​ ಉದ್ಘಾಟಿಸಿದರು. ಪ್ರವಿಣ್​ ಪೂಜಾರಿ, ಭುವನ ಪ್ರಸಾದ್​ ಹೆಗ್ಡೆ, ಸುಕನ್ಯಾ ಶೇಖರ್​ ಇದ್ದರು. 
ಉಡುಪಿ

ಕಲಿಕೆಯ ಮನೋಭಾವದಿಂದ ಕೆಲಸ ಸುಲಭ

* ಜಯಲಕ್ಷ್ಮೀ ಅಮೀನ್​ ಅನಿಸಿಕೆ

* 'ಮದರೆಂಗಿದ ರಂಗ್​' ಕಾರ್ಯಕ್ರಮ 

ಉಡುಪಿ: ಯಾವುದೇ ಸಂಘ&ಸಂಸ್ಥೆಗಳ ಅಭಿವೃದ್ಧಿ, ಉದ್ಧಾರ ಅಥವಾ ಸಾಮಾಜಿಕ ಸೇವೆಯ ಕಾರ್ಯಕ್ಕೆ ಒಗ್ಗಟ್ಟು ಅತ್ಯಗತ್ಯ. ಮಕ್ಕಳು ಹಾಗೂ ಯುವಜನರು ತುಳು ಭಾಷೆ, ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕು. ತುಳು ಸಹಿತ ವಿವಿಧ ಭಾಷೆ ಕಲಿಕೆಯಿಂದ ಜ್ಞಾನ ಗಳಿಸಿಕೊಳ್ಳಬೇಕು. ಕಲಿಕೆಯ ಮನೋಭಾವವಿದ್ದರೆ ಎಲ್ಲ ಕೆಲಸವೂ ಸುಲಭ ಎಂದು ಲಯನ್ಸ್​ 316ಸಿ ಇದರ ಕ್ಯಾಬಿನೆಟ್​ ಪದಾಧಿಕಾರಿ ಜಯಲಕ್ಷ್ಮೀ ಅಮೀನ್​ ತಿಳಿಸಿದರು.
ಉಡುಪಿಯ ಬಡಗಬೆಟ್ಟು ಕ್ರೆಡಿಟ್​ ಕೋ&ಆಪರೇಟಿವ್​ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಉಡುಪಿ ತುಳುಕೂಟ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳುನಾಡ ಧ್ವನಿ ಸಹಭಾಗಿತ್ವದಲ್ಲಿ ಶನಿವಾರ (ಜು.4) ಆಯೋಜಿಸಿದ್ದ 'ಮದರೆಂಗಿದ ರಂಗ್​' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅತಿಥಿ ಶೋಭಾ ಅವರ ಕೈಗೆ ಮದರಂಗಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಡಗಬೆಟ್ಟು ಕ್ರೆಡಿಟ್​ ಕೋ-ಆಪರೇಟಿವ್​ ಸೊಸೈಟಿಯ ಎಜಿಎಂ ಪ್ರವೀಣ್​ ಪೂಜಾರಿ ಮಾತನಾಡಿದರು. ಸುಕನ್ಯಾ ಶೇಖರ್​ ಸ್ವಾಗತಿಸಿದರು. ಗಂಗಾಧರ್​ ಕಿದಿಯೂರು ವಂದಿಸಿದರು. ಯಶೋದಾ ಕೇಶವ ಕಾರ್ಯಕ್ರಮ ನಿರೂಪಿಸಿದರು.
"

ಸೌಂದರ್ಯ ಪ್ರಜ್ಞೆ ಹಾಗೂ ಆರೋಗ್ಯಕ್ಕೆ ಪೂರಕವಾದ ಕಾರ್ಯಕ್ರಮವಿದು. ಮಾರುಕಟ್ಟೆಗಳಲ್ಲಿ ಲಭಿಸುವ ಮದರಂಗಿ ಪ್ಯಾಕ್​ (ಕೋನ್​) ರಾಸಾಯನಿಕಯುಕ್ತವಾಗಿವೆ. ಬಹುತೇಕ ಪ್ಯಾಕ್​ಗಳಲ್ಲಿ ಬಣ್ಣ ಮಿಶ್ರಿತ ಮಾಡಿರುತ್ತಾರೆ. ಆದರೆ, ಇದು ಮದರಂಗಿ ಸೊಪ್ಪು ಅರೆದು ಮಾಡಿದ್ದಾಗಿದೆ. ಮಹಿಳೆಯರು ಮದರಂಗಿ ಹಚ್ಚಿಕೊಳ್ಳುವುದು ನಮ್ಮ ಸಂಪ್ರದಾಯ, ಆಚರಣೆಯೂ ಆಗಿದೆ.

— ಭುವನ ಪ್ರಸಾದ್​ ಹೆಗ್ಡೆ. ಕಾರ್ಯಕ್ರಮದ ಸಂಘಟಕ.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು. 1ರಿಂದ 5ನೇ ತರಗತಿಯ ಮಕ್ಕಳಿಗೆ ಪೀಂಪಿರಿ ಊದುವುದು, ಹಲಸಿನ ಬೇಳೆ ಸಿಪ್ಪೆ ತೆಗೆವ ಸ್ಪರ್ಧೆ ನಡೆಯಿತು. 6ರಿಂದ 10ನೇ ತರಗತಿ ಮಕ್ಕಳಿಗೆ ಮದರಂಗಿ ಸ್ಪರ್ಧೆ, ತುಳುನಾಡ ಬೇಲಿ ಹಣ್ಣು ಗುರುತಿಸುವುದು, ಎಲೆಯಿಂದ ಆಟದ ವಸ್ತು ತಯಾರಿ ಸ್ಪರ್ಧೆ ಜರುಗಿತು. ಪಿಯುಸಿ, ಪದವಿ ವಿದ್ಯಾರ್ಥಿಗಳಿಗಾಗಿ ಮದರಂಗಿ, ಕೇಶಾಲಂಕಾರ, ಬಾಲಕರಿಗೆ ಮುಂಡಾಸು ಕಟ್ಟುವುದು, ಬಾಲಕಿಯರಿಗೆ ಹೂ ಕಟ್ಟುವ ಸ್ಪರ್ಧೆ, ಮಕ್ಕಳಿಗಾಗಿ ತುಳು ರಸಪ್ರಶ್ನೆ ಹಾಗೂ ಎಲ್ಲ ವಿಭಾಗಕ್ಕೂ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.