ಉಡುಪಿಯಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿಯನ್ನು ಎಂ.ಎ. ಗಫೂರ್ ಉದ್ಘಾಟಿಸಿದರು. ದಿನಕರ್ ಹೇರೂರು, ಯೋಗರಾಜ್ ಶಾಸ್ತ್ರಿ, ಪೂರ್ಣಿಮಾ, ಡಾ. ನಿತಿನ್ ಪಾಟೀಲ್, ಪ್ರಸನ್ನ ಶ್ವೇತಾ ಜೈನ ಇತರರಿದ್ದರು.
* ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಫೂರ್ ಅನಿಸಿಕೆ
* ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ಸಾಮಾಜಿಕವಾಗಿ ಕಾಡುತ್ತಿರುವ ಅನೇಕ ಸಮಸ್ಯೆಗಳ ನಿವಾರಣೆಯಾಗಲು ದಾರ್ಶನಿಕರ ಚಿಂತನೆ, ಸಂದೇಶಗಳಿಂದ ಸಾಧ್ಯವಿದೆ. ಭಗವಾನ್ ಮಹಾವೀರರ ಸಂದೇಶ, ಸತ್ಯ ಮತ್ತು ಅಹಿಂಸಾ ಪಾಲನೆಯಿಂದ ಸಾಮರಸ್ಯದ ಸಮಾಜ ಕಟ್ಟುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಇದೆ. ಜೈನರ 24ನೇ ತೀರ್ಥಂಕರರಾಗಿದ್ದ ಅವರ ತತ್ವ ಹಾಗೂ ಶಾಂತಿಯ ಪರಮೋಚ್ಚ ಸಂದೇಶವು ಇಂದಿನ ಸಂಘರ್ಷಮಯ ವಿಶ್ವಕ್ಕೆ ಜ್ಞಾನದೀಪವಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೈನ ಮಿಲನ ಉಡುಪಿ ಜಿಲ್ಲೆ ಸಹಕಾರದಲ್ಲಿ ಸೋಮವಾರ (ಮಾ.30) ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಗವಾನ್ ಮಹಾವೀರರಕುರಿತು ಶ್ವೇತಾ ಜೈನ ವಿಶೇಷ ಉಪನ್ಯಾಸ ನೀಡಿದರು. ರಶ್ಮಿ ಸಾಗರ್ 'ಜಿನಾ ಸ್ಮೃತಿ' ಪ್ರಸ್ತುತ ಪಡಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜೈನ ಸಮುದಾಯದ ಯೋಗರಾಜ್ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ್ ಹೇರೂರು, ಜೈನ ಮಿಲನ್ ಅಧ್ಯಕ್ಷ ಡಾ. ನಿತಿನ್ ಪಾಟೀಲ್, ಭಾರತೀಯ ಜೈನ ಮಿಲನದ ಕಾರ್ಯದರ್ಶಿ ಪ್ರಸನ್ನ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಮಾಂಜಿ ನಮ್ಮಭೂಮಿ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ವಂದಿಸಿದರು.