ಉಡುಪಿಯ ಹಿರಿಯಡ್ಕದಲ್ಲಿ ಆಯೋಜಿಸಿದ್ದ ಸರ್ವಜ್ಞ ಜಯಂತಿಯನ್ನು ಎಂ.ಎ. ಗಫೂರ್​ ಉದ್ಘಾಟಿಸಿದರು. ಪೂರ್ಣಿಮಾ, ಶೇಖರ್​ ಕುಲಾಲ, ಸಂತೋಷ ಕುಲಾಲ, ಕಾಳು ಕುಲಾಲ, ವೀಣಾ, ಪ್ರಕಾಶ್​ ಪ್ರಭು, ರಾಮಾಂಜಿ ಇದ್ದರು. 
ಉಡುಪಿ

ವಚನಗಳಲ್ಲೇ ಸನ್ಮಾರ್ಗ ತೋರಿದ ಸರ್ವಜ್ಞ

* ಎಂ.ಎ. ಗಫೂರ್​ ಅಭಿಮತ

* ಜಿಲ್ಲಾ ಮಟ್ಟದ ಜಯಂತಿ ಉದ್ಘಾಟನೆ

ಉಡುಪಿ: ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆ ಮತ್ತು ಪದಗಳಲ್ಲಿ ವಚನ ಹೇಳುವ ಮೂಲಕ ಕವಿ ಸರ್ವಜ್ಞನು ಸಾಮಾಜಿಕ ಅಂಧಕಾರ ಹೋಗಲಾಡಿಸಿದ್ದಾರೆ. ತ್ರಿಪದಿಯ ಮೂಲಕವೇ ಸಮಾಜ ತಿದ್ದುವಲ್ಲಿ ಶ್ರಮಿಸಿದ್ದು, ಯುವಪೀಳಿಗೆಯ ಉತ್ತಮ ಜೀವನ ನಿರ್ವಹಣೆಗಾಗಿ ಸನ್ಮಾರ್ಗ  ರೂಪಿಸಿದ ಕವಿ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯ ಹಿರಿಯಡ್ಕದ ಡಾ. ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘ (ರಿ.)ಗಳ ಒಕ್ಕೂಟದ ಆಶ್ರಯದಲ್ಲಿ ಶುಕ್ರವಾರ (ಫೆ.20) ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಚನಗಳ ಆದರ್ಶ ಅನುಕರಣೀಯ

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ್​ ಕುಲಾಲ ಮಾತನಾಡಿ, 'ಆಡು ಮುಟ್ಟದ ಸೊಪ್ಪಿಲ್ಲ' ಎಂಬಂತೆ ಸರ್ವಜ್ಞ ಕವಿ ತನ್ನ ವಚನಗಳಲ್ಲಿ ಬರೆಯದ ವಿಚಾರಗಳಿಲ್ಲ. ಎಲ್ಲ ಕ್ಷೇತ್ರ, ಜೀವನದ ಎಲ್ಲ ವಿಭಾಗಗಳ ಬಗ್ಗೆಯೂ ಉಲ್ಲೇಖಿಸಿದ್ದಾನೆ. ನಾವೆಲ್ಲರೂ ಸರ್ವಜ್ಞನ ಆದರ್ಶ, ತತ್ತ್ವ ಅಳವಡಿಸಿಕೊಳ್ಳಬೇಕು. ಅದರಿಂದ ಜೀವನ ಉತ್ತಮವಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕವಿ ಸರ್ವಜ್ಞನ ಕುರಿತು ರಸಪ್ರಶ್ನೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. 
ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸಂತೋಷ್​ ಕುಲಾಲ, ಕುಲಾಲ ಸಂಘ (ರಿ.)ದ ಪೆರ್ಡೂರು ಅಧ್ಯಕ್ಷ ಕಾಳು ಕುಲಾಲ, ಹಿರಿಯಡ್ಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವೀಣಾ, ಉಪ ಪ್ರಾಂಶುಪಾಲ ಪ್ರಕಾಶ್​ ಪ್ರಭು, ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಹಿಂದಿ ಶಿಕ್ಷಕ ರವೀಂದ್ರ ಪ್ರಭು ವಂದಿಸಿದರು.
"

ಹದಿನಾರನೇ ಶತಮಾನದ ಕನ್ನಡದ ಪ್ರಸಿದ್ಧ ತ್ರಿಪದಿ ಕವಿಯಾಗಿದ್ದ ಸರ್ವಜ್ಞನು ಸಾಮಾಜಿಕ ಸಮಾನತೆ, ನೀತಿ ಮತ್ತು ಜ್ಞಾನವನ್ನು ಸರಳ ತ್ರಿಪದಿಗಳ ಮೂಲಕ ಬೋಧಿಸಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ವಿಶೇಷವಾಗಿ ಜನಸಾಮಾನ್ಯರಲ್ಲಿ ನೀತಿ ಪಾಠ ಮಾಡಲು ಇಂದಿಗೂ ಸಹ ಸರ್ವಜ್ಞನ ತ್ರಿಪದಿ ಪ್ರಸ್ತುತವಾಗಿದೆ.