ಉಡುಪಿಯಲ್ಲಿ ಆಯೋಜಿಸಿದ್ದ ಶಿವಾಜಿ ಜಯಂತಿಯಲ್ಲಿ ಪ್ರತೀಕ್ಷಾ ನಾಯಕ್​ ಅವರನ್ನು ಸನ್ಮಾನಿಸಲಾಯಿತು. ಎಂ.ಎ. ಗಫೂರ್​, ದಿನಕರ್​ ಹೇರೂರು, ಸುಬ್ರಹ್ಮಣ್ಯ, ಪ್ರೊ. ಡಾ. ನಾರಾಯಣ ಶೆಣೈ, ಪೂರ್ಣಿಮಾ, ಇಂದಿರಾ ಬಿ., ಪ್ರಕಾಶ್​ ರಾವ್​, ದಿನೇಶ್​ ನಾಯಕ್​ ಇದ್ದರು. 
ಉಡುಪಿ

ಆಡಳಿತ ಕೌಶಲ, ನಾಯಕತ್ವಕ್ಕೆ ಸಾಕ್ಷಿ ಶಿವಾಜಿ

* ಎಂ.ಎ. ಗಫೂರ್​ ಅಭಿಪ್ರಾಯ

* ಜಯಂತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಪ್ರೇರಣೆಯಿಂದ ಆಸಾಧಾರಣ ನಾಯಕತ್ವದ ಗುಣ ಹೊಂದಿದ್ದ ಶಿವಾಜಿಯ ಆಡಳಿತವು ಪ್ರಗತಿಪರ ನೀತಿ ಹಾಗೂ ದಕ್ಷ ಆಡಳಿತದಿಂದ ಗುರುತಿಸಲಟ್ಟಿದೆ. ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಲ್ಲದೆ ತನ್ನ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲಗಳು ದೂರದೃಷ್ಟಿ ನಾಯಕತ್ವಕ್ಕೂ ಸಾಕ್ಷಿಯಾಗಿದ್ದವು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಅಭಿಪ್ರಾಯಪಟ್ಟರು.
ಉಡುಪಿ ನಗರದಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್​ (ರಿ.) ಮತ್ತು ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ (ರಿ.) ಉಡುಪಿ ವತಿಯಿಂದ ಗುರುವಾರ (ಫೆ.19) ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವ ಸಮುದಾಯಕ್ಕೆ ದಾರಿದೀಪ

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಶಿವಾಜಿಯಂತಹ ಐತಿಹಾಸಿಕ ಪುರುಷರು, ಮಹನೀಯರ ಆದರ್ಶ ಹಾಗೂ ಜೀವನ ಚರಿತ್ರೆಗಳು ಯುವಪೀಳಿಗೆಗೆ ದಾರಿದೀಪವಾಗಿದೆ. ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕುವಂತಾಗಬೇಕು ಎಂದರು.

ರಾಷ್ಟ್ರೀಯತೆಯ ಜಾಗೃತಿ

ಎಂಐಟಿ ಮಣಿಪಾಲದ ನಿವೃತ್ತ ಪ್ರೊ. ಡಾ. ನಾರಾಯಣ ಶೆಣೈ ಉಪನ್ಯಾಸ ನೀಡಿ, ಕ್ರಿ.ಶ. 1640ರ ಫೆ.19ರಂದು ಜನಿಸಿದ ಶಿವಾಜಿ, ಕೇವಲ 50 ವರ್ಷ ಜೀವಿಸಿದ್ದರು. ಅಂದಿನ ಕಾಲಘಟ್ಟದಲ್ಲಿಯೇ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ್ದರು. ಜನರಲ್ಲಿ ರಾಷ್ಟ್ರೀಯಯತೆ ಜಾಗೃತಿಗೊಳಿಸಿ ಶ್ರೇಷ್ಠ ಆಡಳಿತ ನೀಡಿದ ಹೆಗ್ಗಳಿಕೆಯಿದೆ. ಸತಿ ಸಹಗಮನ ಪದ್ಧತಿ ನಿಷೇಧ, ಗೋ ಹತ್ಯೆ ನಿಷೇಧ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಯನ್ನು ನಿಮೂರ್ಲನೆ ಮಾಡಿ ಸಮ ಸಮಾಜ ಕಟ್ಟಿದ್ದರು ಎಂದರು.

ಸಾಧಕಿಗೆ ಸನ್ಮಾನ

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಪವರ್​ ಲಿಫ್ಟಿಂಗ್​ನಲ್ಲಿ ಸಾಧನೆಗೈದ ಮರಾಠಾ ಸಮುದಾಯದ ಪ್ರತೀಕ್ಷಾ ನಾಯಕ್​ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್​ (ರಿ.)ನ ಜಿಲ್ಲಾಧ್ಯಕ್ಷ ಪ್ರಕಾಶ್​ ರಾವ್​, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಜಿಲ್ಲಾಧ್ಯಕ್ಷ ದಿನೇಶ್​ ನಾಯಕ್​, ಸಮುದಾಯದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬಸ್ರೂರು ಶಾರದಾ ಕಾಲೇಜು ಉಪನ್ಯಾಸಕ ಅಕ್ಷಯ್​ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ. ವಂದಿಸಿದರು.
"

ಸ್ತ್ರೀಯರ ಮೇಲೆ ಅಪಾರ ಗೌರವ ಹೊಂದಿದ್ದ ಶಿವಾಜಿ ಸಮ ಸಮಾಜಕ್ಕಾಗಿ ಮಹಿಳೆಯರಿಗೂ ಶಕ್ತಿ ತುಂಬಲು ಪ್ರಯತ್ನಿಸಿದ್ದರು. ಜನರ ಭಾವನೆ ಅರಿತು ಅಂದಿನ ದಿನಗಳಲ್ಲಿಯೇ ಸಂವಿಧಾನದಡಿ ಬದುಕಲು ಅವಕಾಶ ನೀಡಿದ್ದರು. ಕರಾವಳಿಯ ರಕ್ಷಣೆಗೆ ಬಲಿಷ್ಠ ನೌಕಾಪಡೆ ಕಟ್ಟಿ ಜಾತಿ, ಧರ್ಮ, ಭೇದವೆನ್ನದೆ ಅರ್ಹತೆಯ ಮೇಲೆ ಸಿಬ್ಬಂದಿ ನೇಮಿಸಿ ಉತ್ತಮ ಆಡಳಿತ ನಡೆಸಿದ್ದರು.