ಉಡುಪಿಯಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿಯನ್ನು ಎಂ.ಎ. ಗಫೂರ್​​ ಉದ್ಘಾಟಿಸಿದರು. ಅಬೀದ್​ ಗದ್ಯಾಳ, ಪೂರ್ಣಿಮಾ, ನವನೀತ್​, ರಾಮಾಂಜಿ ಇದ್ದರು. 
ಉಡುಪಿ

ಭಗೀರಥನ ಪರಿಶ್ರಮ ಎಲ್ಲರ ಬದುಕಿಗೆ ಮಾದರಿ

* ಎಂ.ಎ. ಗಫೂರ್​ ಅನಿಸಿಕೆ

* ಉಡುಪಿಯಲ್ಲಿ ಜಯಂತಿ ಉದ್ಘಾಟನೆ

ಉಡುಪಿ: ರಾಜನಾಗಿ, ಋಷಿಯಾಗಿ ಭಗೀರಥ ಅವರು ಸಮಾಜಕ್ಕೆ ಪರಿಶ್ರಮದ ದೊಡ್ಡ ಸಂದೇಶ ನೀಡಿದ್ದಾರೆ. ಪರಿಶ್ರಮ ಹಾಗೂ ಶ್ರೇಷ್ಠ ಪ್ರಯತ್ನದಿಂದ ಗಂಗೆಯನ್ನೇ ಧರೆಗೆ ತಂದವರು. ಅವರ ತಪಸ್ಸು ಹಾಗೂ ಪರಿಶ್ರಮದ ರೀತಿ ಎಲ್ಲರ ಬದುಕಿಗೆ ಮಾದರಿಯಾಗಿದೆ. ಅವರ ಮನೋಭಾವವನ್ನು ನಮ್ಮ ದುಡಿಮೆ ಮತ್ತು ನಿತ್ಯದ ಬದುಕಿನಲ್ಲಿ ಆಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್​ ಹಾಲ್​ನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಗುರುವಾರ (ಏ.23) ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬದ್ಧತೆ ಅತಿಮುಖ್ಯ

ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಮಾತನಾಡಿ, ನೀರಿನಿಂದ ಉಪ್ಪು ತಯಾರಿಸಿದ್ದರಿಂದ ಅವರು ಉಪ್ಪಾರ ಜನಾಂಗದವರಾದರು. ಹಾಗಾಗಿ ಉಪ್ಪಾರ ಜನಾಂಗಕ್ಕೂ ಭಗೀರಥ ಮಹರ್ಷಿಗೂ ಅವಿನಾಭಾವ ಸಂಬಂಧವಿದೆ. ಯಾವುದೇ ಕೆಲಸವಾಗಿದ್ದರೂ ಬದ್ಧತೆಯಿಂದ ಮಾಡಿದಲ್ಲಿ ಮಾತ್ರ ಯಶಸ್ವಿಯಾಗಲು ಅಥವಾ ಸಾಧನೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲವಾಗುವಂತೆ ಅಧಿಕಾರಿಗಳೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್​ ನವನೀತ್​, ಜಿಲ್ಲಾಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜ್​ನ ಕನ್ನಡ ಉಪನ್ಯಾಸಕ ರಾಮಾಂಜಿ ವಂದಿಸಿದರು.