ಉಡುಪಿ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿ ಬಿಡುಗಡೆಯಾಗಿದ್ದ ಯುವಕನೋರ್ವ ಹಲ್ಲೆಗೊಳಗಾದ ಆರೋಪದಡಿ ಚಿಕಿತ್ಸೆಗೆ ದಾಖಲಾಗಿದ್ದ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲೇ ಶೌಚಾಲಯದ ಕಿಟಕಿಯ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಪೆರ್ಡೂರು ನಾಯರ್ಕೋಡಿಯ ಪ್ರದೀಪ ಪೂಜಾರಿ (27) ಮೃತಪಟ್ಟ ಯುವಕ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಐ ಭರತೇಶ, ಎಸ್ಐ ಮಹೇಶಪ್ರಸಾದ ಹಾಗೂ ಸಿಬ್ಬಂದಿ ಅಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ತಡರಾತ್ರಿ 1 ಗಂಟೆಯ ಬಳಿಕ ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.
ಘಟನೆ ವಿವರ
ಕಳೆದ 8 ವರ್ಷದಿಂದ ಶ್ರಾವ್ಯಾ ಶೆಟ್ಟಿ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಅ.27ರಂದು ರಾತ್ರಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಯುವತಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ ಶೆಟ್ಟಿ, ಶೈಲೇಶ ಶೆಟ್ಟಿ, ಸನತ್, ಕೃಷ್ಣ, ಸುಜಯ ಮತ್ತು ಇತರರು ಕಾರುಗಳಲ್ಲಿ ಆಗಮಿಸಿ ಬಲವಂತವಾಗಿ ಪ್ರದೀಪನನ್ನು ಅವರ ಮನೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಅಲ್ಲಿ ಬೆತ್ತ, ಮರದ ದೊಣ್ಣೆಗಳಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರಲಾಗಿದೆ.
ಗಾಯಗೊಂಡಿದ್ದ ಪ್ರದೀಪ ಚಿಕಿತ್ಸೆಗಾಗಿ ಅ.28ರಂದು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದನು. ತನ್ನ ಮೇಲೆ ನಡೆದ ಹಲ್ಲೆಯಿಂದ ತೀವ್ರವಾಗಿ ಮನನೊಂದಿದ್ದ ಆತ, ಅ.30ರಂದು ಸಂಜೆ 5:30ರ ವೇಳೆಗೆ ಜಿಲ್ಲಾಸ್ಪತ್ರೆಯ ಶೌಚಾಲಯದೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಪ್ರದೀಪನಿಗೆ ಸಾಯುವಂತೆ ಪ್ರಚೋದನೆ ನೀಡಿದ ಆರೋಪಿಗಳಾದ ಶ್ರಾವ್ಯಾ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ, ಶೈಲೇಶ, ಶಶಾಂಕ, ಕೃಷ್ಣ, ಸುಜಯ, ಸನತ್ ಹಾಗೂ ಹೊರ ರಾಜ್ಯದ ಇಬ್ಬರು ಕಾರ್ಮಿಕರ ವಿರುದ್ಧ ಮೃತನ ಸಹೋದರ ದಿಲೀಪ ಪೂಜಾರಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನನ್ನು ಮದುವೆಯಾಗುವಂತೆ ನಿರಂತರ ಕಿರುಕುಳ ನೀಡುತ್ತಿರುವುದಾಗಿ ಈ ಹಿಂದೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಶ್ರಾವ್ಯಾ ಶೆಟ್ಟಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಪ್ರದೀಪ ಪೂಜಾರಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದನು. ಇದೇ ದ್ವೇಶದ ಹಿನ್ನೆಲೆಯಲ್ಲಿ 2025ರ ನವೆಂಬರ್ನಲ್ಲಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿರುವುದಾಗಿ ಮತ್ತೆ ದೂರು ದಾಖಲಾಗಿತ್ತು. ಹೀಗಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಉಡುಪಿ ಮಹಿಳಾ ಠಾಣೆ ಪೊಲೀಸರು ಪ್ರದೀಪನನ್ನು ಮತ್ತೆ ಬಂಧಿಸಿದ್ದರು.