ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ
ಉಪ್ಪಿನಂಗಡಿ: ಕಡೇಶಿವಾಲಯ ನಿವಾಸಿ ವೀರಮ್ಮ ಎಂಬುವರು ನಾಲ್ಕು ಆ.28ರಂದು ಕಳೆದುಕೊಂಡಿದ್ದ ಚಿನ್ನ, ಪರ್ಸ್ ಹಾಗೂ ಮೊಬೈಲ್ ಫೋನನ್ನು ಮತ್ತೆ ಪಡೆದುಕೊಂಡಿದ್ದಾರೆ. ಬಸ್ ನಿಲ್ದಾಣ ಬಳಿಯ ಮೀನು ಮಾರುಕಟ್ಟೆ ಬಳಿ ಅವರು ವಸ್ತುಗಳನ್ನು ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಇತ್ತ ಉಪ್ಪಿನಂಗಡಿಯ ಲಕ್ಷ್ಮೀನಗರ ನಿವಾಸಿ ನವೀನ್ ಎಂಬುವರಿಗೆ ಪರ್ಸ್ ಸಿಕ್ಕಿತ್ತು. ತಂದೆಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದ ವೇಳೆ ಚಿನ್ನಾಭರಣ ಹಾಗೂ ಮೊಬೈಲ್ ಸಮೇತ ಪರ್ಸನ್ನು ಆಸ್ಪತ್ರೆಯ ನರ್ಸ್‌ಗೆ ನೀಡಿ, ಬಿದ್ದು ಸಿಕ್ಕಿರುವುದಾಗಿ ತಿಳಿಸಿದ್ದರು. ನರ್ಸ್ ಮೊಬೈಲ್ ಫೋನ್ ಮೂಲಕ ವೀರಮ್ಮ ಅವರನ್ನು ಪತ್ತೆ ಹಚ್ಚಿ ಮಾಹಿತಿ ರವಾನಿಸಿದ್ದರು.
ತಕ್ಷಣ ಪೊಲೀಸರ ಜತೆ ಆಸ್ಪತ್ರೆಗೆ ಭೇಟಿ ನೀಡಿದ ವೀರಮ್ಮ, ದೇವರ ದಯೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಮರಳಿ ಕೈ ಸೇರಿದೆ, 35 ಸಾವಿರ ರೂ. ಹೋದರೂ ಚಿಂತೆ ಇಲ್ಲವೆಂದು ತಿಳಿಸಿ, ಪೊಲೀಸರಿಗೆ ನೀಡಿದ ದೂರನ್ನು ಹಿಂತೆಗೆದುಕೊಂಡು ಚಿನ್ನಾಭರಣದೊಂದಿಗೆ ಹಿಂತಿರುಗಿದ್ದಾರೆ.