ಪೆರ್ಲ: ಪೆರ್ಲ- ಸ್ವರ್ಗ ರಸ್ತೆಯಲ್ಲಿ ಮಂಗಳವಾರ ಲಾರಿಯೊಂದರ ಆ್ಯಕ್ಸಿಲ್ ತುಂಡಾಗಿ ಅರ್ಧ ಗಂಟೆ ಬಸ್ ಸಹಿತ ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಸ್ವರ್ಗ ಸೇತುವೆ ಬಳಿ ನಡೆದಿದೆ.
ಪಾಣಾಜೆ ಭಾಗದಿಂದ ಗೆರಟೆ ಹೇರಿಕೊಂಡು ಬರುತ್ತಿದ್ದ ಲಾರಿಗೆ ಸ್ವರ್ಗ ಸೇತುವೆ ಮುಂದಿನ ತಿರುವಿನಲ್ಲಿ ಪೆರ್ಲ ಕಡೆಯಿಂದ ಬಂದ ವಾಹನವೊಂದು ಎದುರಾಗಿದ್ದು, ಸ್ಥಳ ಬಿಟ್ಟುಕೊಡುವ ಅವಸರದಲ್ಲಿ ಚಾಲಕ ಲಾರಿಯನ್ನು ರಸ್ತೆಯಿಂದ ಕೆಳಗಿಳಿಸಿದ್ದಾನೆ.
ಈ ವೇಳೆ ಆ್ಯಕ್ಸಿಲ್ ತುಂಡಾಗಿ ಲಾರಿ ರಸ್ತೆಯಲ್ಲೇ ಸಿಲುಕಿಕೊಂಡು ಎರಡೂ ಬದಿಗಳ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬದಿಯಡ್ಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಹಾಯದೊಂದಿಗೆ ಲಾರಿಯನ್ನು ರಸ್ತೆ ಬದಿಗೆ ಸರಿಸಿ ವಾಹನ ಸಂಚಾರ ಸುಗಮಗೊಳಿಸಿದರು.