ಉಡುಪಿಯ ರಾಜಾಂಗಣದಲ್ಲಿ ನಡೆದ ಕೋಟಿ ತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಸುಗುಣೇಂದ್ರ ಶ್ರೀ ಆಶೀರ್ವಚನ ನೀಡಿದರು. ಸುಶ್ರೀಂದ್ರ ಶ್ರೀ ಇದ್ದರು. 
ಉಡುಪಿ

ಸರ್ವಶ್ರೇಷ್ಠ ತುಳಸಿ ಶ್ರೀಕೃಷ್ಣನಿಗೆ ಬಲು ಇಷ್ಟ

* ಪರ್ಯಾಯ ಸುಗುಣೇಂದ್ರ ಶ್ರೀ ಆಶೀರ್ವಚನ

* ಗೀತಾಚಾರ್ಯನಿಗೆ ಕೋಟಿ ತುಳಸಿ ಅರ್ಚನೆ

ಉಡುಪಿ: ಶ್ರೀಕೃಷ್ಣನ ಪೂಜಾಸೇವೆಯಲ್ಲಿ ತುಳಸಿಗೆ ಹೆಚ್ಚಿನ ಪ್ರಧಾನ್ಯತೆ ಇದೆ. ಇದು ಅತ್ಯಂತ ಮಂಗಳಕರ ಸೇವೆಯಾಗಿದೆ. ಪೌರಾಣಿಕ ಕಥಾನಕದ ಹಿನ್ನೆಲೆಯಲ್ಲಿ ತುಳಸಿಯು ಸರ್ವಶ್ರೇಷ್ಠವಾದುದಾಗಿದ್ದು, ಶ್ರೀಕೃಷ್ಣನಿಗೆ ಬಲು ಇಷ್ಟ. ನಮ್ಮ ಪರ್ಯಾಯದ ಆರಂಭದಲ್ಲಿ ಕೋಟಿ ಗೀತಾ ಲೇಖನ ಅಭಿಯಾನ ಶುರವಾದಾಗ ಕೋಟಿ ತುಳಸಿ ಅರ್ಚನೆ ಮಾಡಿದ್ದೆವು. ಇದೀಗ ಪರ್ಯಾಯದ ಅಂತಿಮ ಹಂತದಲ್ಲಿ ಶ್ರೀಕೃಷ್ಣನಿಗೆ ಮತ್ತೊಮ್ಮೆ ಕೋಟಿ ತುಳಸಿ ಅರ್ಚಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಉಡುಪಿ ತಾಲೂಕು ಬ್ರಾಹ್ಮಣ ಸಭಾದ 25 ವಲಯಗಳ ಬ್ರಾಹ್ಮಣ ಸಮಿತಿ ವತಿಯಿಂದ ಭಾನುವಾರ (ಡಿ.28) ಬೆಳಗ್ಗೆ ಆಯೋಜಿಸಿದ್ದ ಕೋಟಿ ತುಳಸಿ ಅರ್ಚನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಆತ ಕನಕಪ್ರಿಯನಷ್ಟೇ ಅಲ್ಲ. ತುಳಸೀ ಪ್ರಿಯನೂ ಹೌದು ಎಂದರು.

ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ

ಮಧ್ವಾಚಾರ್ಯರು ಗೀತೆಯ ಜತೆಗೆ ವಿಷ್ಣು ಸಹಸ್ರನಾಮವನ್ನೂ ಪಠಿಸಬೇಕೆಂದು ತಿಳಿಸಿದ್ದಾರೆ. ಅದರಂತೆ ನಮ್ಮ ವಿಶ್ವಗಿತಾ ಪರ್ಯಾಯದಲ್ಲಿ ಗೀತೆಯ ನಿರಂತ ಪ್ರಚಾರ ಮಾಡಲಾಗಿದೆ. ಶಾಸ್ತ್ರ ಸಂದೇಶದಂತೆ ಕೃಷ್ಣನಿಗೆ ಇಂದು ಕೋಟಿ ತುಳಸಿ ಅರ್ಚನೆಯಷ್ಟೇ ಅಲ್ಲದೆ, ಒಂದು ಕೋಟಿ ವಿಷ್ಣು ಸಹಸ್ರನಾಮಗಳ ಪಾರಾಯಣವೂ ನಡೆದಿದೆ. ಇದು ಶ್ರೀಕೃಷ್ಣನ ಸಂಕಲ್ಪವಾಗಿದೆ. ಪಾರ್ಥ ಸಾರಥಿ ಸ್ವರ್ಣ ರಥ ಸಮರ್ಪಣೆ ನಿಮಿತ್ತ ಕೋಟಿ ತುಳಸಿ ಅರ್ಚನೆ ಸಂಯೋಜಿಸಿರುವ ಬ್ರಾಹ್ಮಣ ಸಮಾಜದವರು ಅಭಿನಂದನಾರ್ಹರು ಎಂದರು. 

ಸ್ವರ್ಣಕ್ಕಿಂತಲೂ ಮಿಗಿಲು

ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ಶ್ರೀ ಮಾತನಾಡಿ, ಬ್ರಾಹ್ಮಣರು ಭಕ್ತಿಯ ತುಳಸಿ ಅರ್ಚಿಸುವ ಮೂಲಕ ಸರ್ವ ಸಮಾಜದ ಏಳ್ಗೆ, ಅಭಿವೃದ್ಧಿ ಬಯಸಿದ್ದಾರೆ. ತುಳಸಿಯು ಬಂಗಾರಕ್ಕಿಂತಲೂ ಹೆಚ್ಚು ಮಹತ್ವ, ಶ್ರೇಷ್ಠತೆ ಹೊಂದಿದೆ. ಕೃಷ್ಣ ಪರಮಾತ್ಮನಿಗೆ ವಿವಿಧ ಬಗೆಯ ಹೂಗಳಿಗಿಂತ ಒಂದುಕುಡಿ ತುಳಸಿ ಬಲು ಇಷ್ಟ ಎಂದರು.
ಉಡುಪಿ ತಾಲೂಕು ಬ್ರಾಹ್ಮಣ ಸಭಾ, ಉಡುಪಿ ಜಿಲ್ಲಾ ಬ್ರಾಹ್ಮಣ ಸಭಾ ಹಾಗೂ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್​, ತುಳು ಶಿವಳ್ಳಿ ಮಾಧ್ವ ಮಹಾಮಂಡಳ ಸಂಸ್ಥೆಗಳಿಗೆ ಶ್ರೀಗಳು 'ಶ್ರೀಕೃಷ್ಣ ಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ, ಹಯವದನ ಭಟ್​, ಮಂಜುನಾಥ ಉಪಾಧ್ಯಾಯ ಹಾಗೂ ಉಡುಪಿ ತಾಲೂಕು ಬ್ರಾಹ್ಮಣ ಸಭಾದ 25 ವಲಯಗಳ ಸಮಿತಿ ಸದಸ್ಯರು, ಮಠದ ದಿವಾನ ನಾಗರಾಜ್​ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್​ ತಂತ್ರಿ ಉಪಸ್ಥಿತರಿದ್ದರು. ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್​ ಭಟ್​ ಕಾರ್ಯಕ್ರಮ ನಿರ್ವಹಿಸಿದರು.
"

ಮಧ್ವಾಚಾರ್ಯರು ಎರಡು ಬೆರಳನ್ನು ತೋರಿಸುತ್ತಿರುವ ಭಾವಚಿತ್ರವಿದೆ. ಅದು ಭಗವದ್ಗೀತೆ ಮತ್ತು ವಿಷ್ಣು ಸಹಸ್ರನಾಮವನ್ನು ಆತ್ಮೋದ್ಧಾರಕ್ಕಾಗಿ ಪಠಿಸಿ ಎನ್ನುವುದರ ದ್ಯೋತಕವಾಗಿದೆ. ನಮ್ಮ ಪರ್ಯಾಯದ ಎರಡು ವರ್ಷದ ಅವಧಿಯಲ್ಲಿ ಉದಯಾಸ್ತಮಾನ ನಿತ್ಯ ಗೀತಾ ಪಾರಾಯಣ, ನಿತ್ಯ ಗೀತೆಯ ಕುರಿತಾಗಿ ವಿವಿಧ ಆಯಾಮಗಳಲ್ಲಿ ಜ್ಞಾನ ಯಜ್ಞ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಭಾಗಿತ್ವದಲ್ಲಿ ಲಕ್ಷ ಕಂಠ ಗೀತಾ ಪಾರಾಯಣವೂ ನಡೆದಿದೆ. ಕೃಷ್ಣನಿಗೆ ಮುತ್ತು, ಚಿನ್ನದ ಕವಚ ಹಾಗೂ ಸುವರ್ಣ ರಥ ಸಮರ್ಪಿಸಿದ್ದೇವೆ. ಇದು ನಮ್ಮ ಪರ್ಯಾಯದ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವಾಗಿದೆ.

ಶ್ರೀಕೃಷ್ಣನಿಗೆ ಸಮರ್ಪಿಸಲು ತುಳಸಿ ಜೋಡಿಸುತ್ತಿರುವ ಮಾತೃಮಂಡಳಿಯ ಸದಸ್ಯೆಯರು.