ಉಡುಪಿಯ ಕಟಪಾಡಿಯಲ್ಲಿ ಲೋಂಬಾರ್ಡ್ ಮಿಷನ್ ಆಸ್ಪತ್ರೆಯ ಆರೋಗ್ಯ ಕೇಂದ್ರವನ್ನು ಬಿಷಪ್ ಹೇಮಚಂದ್ರ ಕುಮಾರ್ ಉದ್ಘಾಟಿಸಿದರು. ಡಾ.ಸುಶೀಲ್ ಜತ್ತನ್ನ, ವಿನಯಕುಮಾರ್ ಸೊರಕೆ, ಫೌಸ್ಟಿನ್ ಲೂಕಸ್ ಲೋಬೋ, ಡಾ. ಎ.ರವೀಂದ್ರನಾಥ್ ಶೆಟ್ಟಿ, ಇಕ್ಬಾಲ್ ಸಂಶುದ್ದೀನ್ ಇತರರಿದ್ದರು.
* ಬಿಷಪ್ ರೆ. ಹೇಮಚಂದ್ರ ಕುಮಾರ್ ಆಶಯ
* ಲೋಂಬಾರ್ಡ್ ಆಸ್ಪತ್ರೆಯ ಆರೋಗ್ಯ ಕೇಂದ್ರ ಉದ್ಘಾಟನೆ
ಉಡುಪಿ: ಉತ್ತಮವಾದ ಆರೋಗ್ಯ ಸೇವೆ ಇಂದು ನಗರ ಪ್ರೇಶಗಳಲ್ಲಿ ಮಾತ್ರ ಲಭಿಸುತ್ತಿದೆ. ಅಂತಹ ಆರೋಗ್ಯ ಸೇವೆ ಗ್ರಾಮೀಣ ಪ್ರದೇಶದ ಅಸಹಾಯಕರು, ಆರ್ಥಿಕವಾಗಿ ಹಿಂದುಳಿದವರಿಗೂ ಕೂಡ ಪರಿಪೂರ್ಣವಾಗಿ ಲಭಿಸಬೇಕಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡ ಲೋಂಬಾರ್ಡ್ ಆಸ್ಪತ್ರೆಯ ಆರೋಗ್ಯ ಕೇಂದ್ರ ಒಳ್ಳೆಯ ಸೇವೆ ನೀಡುವಂತಾಗಲಿ ಎಂದು ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮ ಪ್ರಾಂತ (ಕೆಎಸ್ಡಿ)ದ ಬಿಷಪ್ ರೈಟ್ ರೆ.ಹೇಮಚಂದ್ರ ಕುಮಾರ್ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಸಿಎಸ್ಐ ಲೋಂಬಾರ್ಡ್ ಮೆಮೋ ರಿಯಲ್(ಮಿಷನ್) ಆಸ್ಪತ್ರೆಯ ಪೂರ್ಣ ಪ್ರಮಾಣದ ಮೊದಲ ಆರೋಗ್ಯ ಕೇಂದ್ರ (ಪಾಲಿ ಕ್ಲಿನಿಕ್) ವನ್ನು ಕಟಪಾಡಿಯ ಬಸ್ ನಿಲ್ದಾಣದ ಬಳಿ ಶನಿವಾರ (ಏ.4) ಉದ್ಘಾಟಿಸಿ ಮಾತನಾಡಿದರು.
ತಜ್ಞ ವೈದ್ಯರಿಂದ ತಪಾಸಣೆ
ಉಡುಪಿಯ ಮಿಷನ್ ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಮಾತನಾಡಿ, ಕಟಪಾಡಿಯ ಈ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಾಲಯ ಸೇವೆ, ಎಕ್ಸರೇ ಯುನಿಟ್ ಸೇರಿದಂತೆ ಎಲ್ಲ ಸೌಲಭ್ಯ ಇರಲಿದೆ. ವಾರದಲ್ಲಿ ಆರು ದಿನ ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಈ ಕೇಂದ್ರ ತೆರೆದಿರುತ್ತದೆ. ಇಲ್ಲಿ ಕಾಯಂ ವೈದ್ಯರೊಂದಿಗೆ ಮಿಷನ್ ಆಸ್ಪತ್ರೆಯ ಎಲ್ಲ ವಿಭಾಗಗಳ ತಜ್ಞ ವೈದ್ಯರ ಸೇವೆಯೂ ಲಭ್ಯವಿರಲಿದೆ. ಇದು ಕೇವಲ ಕಟ್ಟಡಗಳ ಕೇಂದ್ರವಲ್ಲ. ನಮ್ಮ ದೃಷ್ಟಿಯ ಸಾರ್ಥಕತೆಯಾಗಿದೆ. ಇದು ಜನರ ಸೇವೆಗಾಗಿಯೇ ಹೊರತು ಕೇವಲ ಲಾಭಕ್ಕಾಗಿ ಅಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವಂ.ಫೌಸ್ಟಿನ್ ಲೂಕಸ್ ಲೋಬೋ ಮಾತನಾಡಿದರು.
ಕಟಪಾಡಿಯ ಹಿರಿಯ ವೈದ್ಯ ಡಾ. ಎ.ರವೀಂದ್ರನಾಥ್ ಶೆಟ್ಟಿ, ಕಟಪಾಡಿ ಗ್ರಾಪಂನ ಮಾಜಿ ಅಧ್ಯಕ್ಷೆ ಪ್ರಭಾ ಬಿ. ಶೆಟ್ಟಿ, ಕಟಪಾಡಿಯ ಉದ್ಯಮಿ ಇಕ್ಬಾಲ್ ಸಂಶುದ್ದೀನ್, ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರಶಾಂತ್ ಜತ್ತನ್ನ, ಸಿಎಸ್ಐ ಕ್ರಿಸ್ಟ್ ಚರ್ಚ್ನ ರೆ.ಅಕ್ಷಯ್ ಅಮ್ಮನ್ನ, ಸಿಎಸ್ಐ ಕೆಎಸ್ಡಿ ಅಸೋಸಿಯೇಟ್ ಸೆಕ್ರಟರಿ ಸ್ಟಿಫನ್ ಕರ್ಕಡ, ಆಸ್ಪತ್ರೆಯ ಪಿಆರ್ಒ ರೋಹಿ ರತ್ನಾಕರ್, ಆಡಳಿತಾಧಿಕಾರಿ ದೀನಾ ಪ್ರಭಾವತಿ, ಕಾರ್ಯನಿರ್ವಾಹಕ ವ್ಯವಸ್ಥಾಪಕಿ ಕಾವ್ಯಶ್ರೀ ಶೆಟ್ಟಿ ಉಪಸ್ಥಿತರಿದ್ದರು.
ಸಿಎಸ್ಐ ಕೆಎಸ್ಡಿ ರೆ.ಖಜಾಂಚಿ ಐವಾನ್ ಡಿಸೋನ್ಸ್ ಹಾಗೂ ಉಡುಪಿ ಏರಿಯಾ ಚೇರ್ಮನ್ ರೆ.ಕಿಶೋರ್ ಕುಮಾರ್ ಪ್ರಾರ್ಥಿಸಿದರು. ಎಲ್ಎಂಸಿಒಎನ್ ಪ್ರಾಂಶುಪಾಲೆ ಡಾ.ಸುಜಾ ಕರ್ಕಡ ಸ್ವಾಗತಿಸಿದರು. ಎಲ್ಎಂಎಸ್ಒಎನ್ ಪ್ರಾಂಶುಪಾಲೆ ವೀಣಾ ಮೆನೇಜಸ್ ವಂದಿಸಿದರು. ನರ್ಸಿಂಗ್ ಟ್ಯೂಟರ್ ಹೇಮಲತಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.