ಲೋಕಾಯುಕ್ತ ಪೊಲೀಸರು ಆದಿಉಡುಪಿಯಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಕಡತಗಳ ಪರಿಶೀಲನೆ ನಡೆಸಿದ್ದಾರೆ
ಉಡುಪಿ: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಸರ್ಚ್ ವಾರಂಟ್ ಪಡೆದು ಶುಕ್ರವಾರ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಸಾವಿರಕ್ಕೂ ಅಧಿಕ ಕಡತಗಳ ವಿಲೇವಾರಿಗೆ ಬಾಕಿಯಿದ್ದು, ಶುಕ್ರವಾರ 250ಕ್ಕೂ ಅಧಿಕ ಕಡತಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ನಿಯಮ ಬಾಹಿರವಾಗಿ ವಿಲೇವಾರಿ ಮಾಡಿದ ಕಡತಗಳು ಕಂಡುಬಂದಿದ್ದು, ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಮುಂದಿನ ಕಾನೂನು ಕ್ರಮಕ್ಕೆ ಲೋಕಾಯುಕ್ತರಿಗೆ ವಿವರವಾದ ವರದಿ ಸಲ್ಲಿಸಲಿದ್ದಾರೆ. ಶನಿವಾರವೂ ಕಡತ ಪರಿಶೀಲನೆ ಮುಂದುವರಿಯಲಿದೆ.
ಮಂಗಳೂರು ಲೋಕಾಯುಕ್ತ ಎಸ್.ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ, ಉಡುಪಿ ಲೋಕಾಯುಕ್ತ ಡಿ.ವೈ.ಎಸ್.ಪಿ ಹಾಲಮೂರ್ತಿ ರಾವ್, ಪೊಲೀಸ್ ಇನ್ಸ್ಪೆಕ್ಟರ್ ರಾಜೇಂದ್ರ ನಾಯ್ಕ್ ಹಾಗೂ ಮಂಗಳೂರು ಲೋಕಾಯುಕ್ತ ಇನ್ಸ್ಪೆಕ್ಟರ್ ಭಾರತಿ ಮತ್ತು 16 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.