ಉಡುಪಿ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದರು.
ಉಡುಪಿ: ಜಿಲ್ಲೆಯಲ್ಲಿ ಲೋಕಾಯುಕ್ತ ಪೊಲೀಸರು ವಿವಿಧ ತಾಲೂಕು ಕಚೇರಿಗಳಿಗೆ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಚೇರಿಗಳಲ್ಲಿನ ಬಾಕಿ ಕಡತಗಳ ಪರಿಶೀಲನೆ ಕಾರ್ಯ ನಡೆಸುತ್ತಿದ್ದು, ದಿನವಿಡೀ ತಪಾಸಣೆ ನಡೆಸಿದರು. ಬ್ರಹ್ಮಾವರ ಹೊರತುಪಡಿಸಿ ಜಿಲ್ಲೆಯ ಎಲ್ಲ ಆರು ತಾಲೂಕು ಕಚೇರಿಗಳಿಗೆ ದಾಳಿ ನಡೆಸಿದ್ದರು.
ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಈ ಹಿಂದೆ ಕರ್ನಾಟಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಗುರುವಾರ (ಆ.27) ಬೆಳಗ್ಗೆ ಉಡುಪಿ, ಕುಂದಾಪುರ, ಕಾಪು, ಹೆಬ್ರಿ, ಕಾರ್ಕಳ, ಬೈಂದೂರು ತಾಲೂಕು ಕಚೇರಿಗಳಿಗೆ ಲೋಕಾಯುಕ್ತದ ಆರು ತಂಡಗಳು ಏಕಾಕಾಲಕ್ಕೆ ದಾಳಿ ನಡೆಸಿತ್ತು.
ಎರಡು ತಿಂಗಳ ಹಿಂದೆ ಬ್ರಹ್ಮಾವರ ತಾಲೂಕು ಕಚೇರಿಗೆ ದಾಳಿ ನಡೆಸಿದ್ದರಿಂದ ಅದನ್ನು ಕೈಬಿಡಲಾಗಿತ್ತು. ಉಡುಪಿ ಮತ್ತು ಮಂಗಳೂರಿನ ಇಬ್ಬರು ಡಿವೈಎಸ್ಪಿ, ಉಡುಪಿಯ ಒಬ್ಬರು, ಮಂಗಳೂರಿನ ನಾಲ್ವರು ಹಾಗೂ ಕಾರವಾರದ ಓರ್ವ ಪೊಲೀಸ್ ನಿರೀಕ್ಷಕರು ತಂಡದಲ್ಲಿದ್ದರು ಎಂದು ತಿಳಿದುಬಂದಿದೆ.
ಲೋಕಾಯುಕ್ತದ ಉಡುಪಿ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಹೆಬ್ರಿ ತಾಲೂಕು ಕಚೇರಿಯಲ್ಲಿ ಕಡತ ಪರಿಶೀಲನಾ ಕಾರ್ಯ ನಡೆದಿದೆ. ತಾಲೂಕು ಕಚೇರಿಯಲ್ಲಿನ ಬಾಕಿ ಕಡತ, ಕಡತ ವಿಳಂಬ, ಸಾರ್ವಜನಿಕರು ನೀಡಿರುವ ದೂರು ಅರ್ಜಿಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಹಲವು ಕಡತಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾಗಿ ತಿಳಿದುಬಂದಿದೆ.