ಲೋಕಾಯುಕ್ತ ಪೊಲೀಸರು ನಗರಸಭೆಯಲ್ಲಿ ದಾಖಲೆಗಳ ತಪಾಸಣೆ ಕೈಗೊಂಡಿದ್ದಾರೆ.
ಉಡುಪಿ: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನಗರಸಭೆಯಲ್ಲಿ ಗುರುವಾರ ದಾಖಲೆಗಳ ತಪಾಸಣೆ ಕೈಗೊಂಡಿದ್ದಾರೆ.
ನಗರಸಭೆಯಲ್ಲಿ ಕೆಲವು ಕಡತಗಳು ದೀರ್ಘಕಾಲದಿಂದ ವಿಲೇವಾರಿಯಾಗದೇ ಅನಗತ್ಯವಾಗಿ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಸಾರ್ವಜನಿಕರ ಆರೋಪಗಳು ಕೇಳಿಬಂದಿದ್ದವು. ಈ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ.
ಕಂದಾಯ, ಪರಿಸರ, ಇಂಜಿನಿಯರಿಂಗ್, ಆಡಳಿತ ವಿಭಾಗಗಳಲ್ಲಿ ಕಡತಗಳ ನಿರ್ವಹಣೆ ಹಾಗೂ ಸಾರ್ವಜನಿಕ ಅರ್ಜಿಗಳ ವಿಲೇವಾರಿ ಸ್ಥಿತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಕೋಟ್ಯಂತರ ರೂ. ತೆರಿಗೆ ಸಂಗ್ರಹ ಬಾಕಿ, ವಿಲೇವಾರಿಯಾಗದ ನೂರಾರು ಅರ್ಜಿಗಳು ತಪಾಸಣೆ ವೇಳೆ ಕಂಡುಬಂದಿದೆ. ಶುಕ್ರವಾರವೂ ತಪಾಸಣೆ ಮುಂದುವರಿಯಲಿದೆ.
ಲೋಕಾಯುಕ್ತ ಡಿಎಸ್ಪಿ ಹಾಲಮೂರ್ತಿ, ಸುರೇಶ್ ಕುಮಾರ್, ಇನ್ಸ್ ಪೆಕ್ಟರ್ ಮಂಜುನಾಥ್, ರಾಜೇಂದ್ರ ನಾಯಕ್, ಚಂದ್ರಶೇಖರ್ ಸೇರಿದಂತೆ 25ಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.