ಲಾಕ್ಡ್ ಹೌಸ್ ಬೀಟ್ ಸಿಸ್ಟಮ್
ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರು ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕಾಗಿ ಮನೆಯನ್ನು ಲಾಕ್ ಮಾಡಿ ಹೊರಗೆ ಹೋದಾಗ ಅಂತಹ ಮನೆಗಳ ಮೇಲೆ ನಿಗಾ ಇಡಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಎನ್ನುವ ವಿನೂತನ ಕಾರ್ಯಕ್ರಮ ಆರಂಭಿಸಲಾಗಿದೆ.
ಲಾಕ್ ಆಗಿರುವ ಮನೆಗಳ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸುತ್ತಾರೆ. ಮನೆ ಇರುವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಠಾಣಾ ಬೀಟ್ ಸಿಬ್ಬಂದಿ ಮನೆಗೆ ಭೇಟಿ ನೀಡಿ ರಾತ್ರಿ ಮತ್ತು ಹಗಲು ವೇಳೆ ಮನೆಯ ಸೂಕ್ತ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತಾರೆ. ಸಾರ್ವಜನಿಕರು ಮನೆಯನ್ನು ಲಾಕ್ ಮಾಡಿ ಹೊರಡುವಾಗ ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಪ್ರಾರಂಭಿಸಲಾದ ವಿಶೇಷ ದೂರವಾಣಿ ಸಂಖ್ಯೆ 0820-&2526709 ಕರೆ ಮಾಡಿ ಮಾಹಿತಿಯನ್ನು ನೀಡಬೇಕು. ನಿಯಂತ್ರಣ ಕೊಠಡಿಯಿಂದ ನೀಡುವ ವಾಟ್ಸಾಪ್ ಸಂಖ್ಯೆಗೆ ಮನೆಯಿಂದ ತೆರಳುವ ಮತ್ತು ಮರಳಿ ಬರುವ ದಿನಾಂಕ, ಸಮಯ, ಮನೆಯ ನಿಖರ ವಿಳಾಸ ಹಾಗೂ ಮನೆಯ ಮುಂಭಾಗ ನಿಂತು ತೆಗೆದ ಒಂದು ಸೆಲ್ಫಿ ಫೋಟೋ ನೀಡಬೇಕು.
ನಂತರ ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಈ ಬಗ್ಗೆ ಸಂಬಂಧಿತ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗುವುದು. ನಂತರ ಬೀಟ್ ಸಿಬ್ಬಂದಿ ಮನೆಯ ಭದ್ರತೆ ಮತ್ತು ಸುರಕ್ಷತೆಯನ್ನು ಖಚಿತಪಡಿಸುತ್ತಾರೆ. ಈ ಸೌಲಭ್ಯವು ಕೇವಲ ಸ್ವಂತ ಅಥವಾ ವೈಯಕ್ತಿಕ ಮನೆಗಳಿಗೆ ಮಾತ್ರ ಲಭ್ಯವಿದ್ದು, ಬಹುಮಹಡಿ ಫ್ಲಾಟ್ಗಳಿಗೆ ಅನ್ವಯಿಸುವುದಿಲ್ಲ. ಯಾವುದೇ ಅಧಿಕೃತವಲ್ಲದ ಅಥವಾ ಅಪರಿಚಿತ ಸಂಖ್ಯೆಗಳೊಂದಿಗೆ ಮನೆಯ ವಿವರ ಹಾಗೂ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.