ಎಂಎಸ್‌ಇಝಡ್/ಜಿಎಂಪಿಎಲ್ ಸಮೀಪ ನವಿಲು ಮೃತಪಟ್ಟಿರುವುದು.
ಗುರುಪುರ: ಬಜ್ಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಂಎಸ್‌ಇಝಡ್/ ಜಿಎಂಪಿಎಲ್ ಸಮೀಪ ಜುಲೈ 9ರಂದು ರಾಷ್ಟ್ರೀಯ ಪಕ್ಷಿ ನವಿಲೊಂದು ಮೃತಪಟ್ಟಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಜುಲೈ 10ರಂದು ಸ್ಥಳೀಯರು ಪಟ್ಟಣ ಪಂಚಾಯಿತಿಗೆ ಮನವಿಯೊಂದು ಸಲ್ಲಿಸಿದ್ದರು. ಈ ಪತ್ರದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಪಂಚಾಯಿತಿ ಪತ್ರ ಬರೆದು ಸತ್ಯಾಸತ್ಯತೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ನವಿಲು ಮೃತಪಟ್ಟಿರುವ ದಟ್ಟ ಜನವಸತಿ ಪ್ರದೇಶದಲ್ಲಿ ಈ ಹಿಂದೆ ಕೋಳಿಗಳು ಮತ್ತು ಇತರ ಪಕ್ಷಿಗಳು ಸಾವನ್ನಪ್ಪಿದ್ದವು. ಪರಿಸರದ ಮೇಲಾಗಿರುವ ವೈಪರಿತ್ಯದಿಂದ ಇಲ್ಲಿ ಪಕ್ಷಿಗಳು ಸಾವನ್ನಪ್ಪುತ್ತಿವೆಯೇ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿ, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.
ವಿಷಪೂರಿತ ಹಾವುಗಳನ್ನೇ ತಿಂದು ಜೀರ್ಣಿಸುವ ನವಿಲಿನ ಸಾವು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿರುವುದಲ್ಲದೆ, ಜಿಎಂಪಿಎಲ್‌ನ ಸ್ಟೀಮ್ ಇನ್ ಹೀಲಿಂಗ್ ಪ್ರಕ್ರಿಯೆಯಿಂದ ಹೊರ ಬರುವ ವಿಷಾನಿಲದಿಂದ ನವಿಲು ಸಾವನ್ನಪ್ಪಿರಬಹುದೇ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಇಲ್ಲಿ ನವಿಲೊಂದು ಸತ್ತಿತ್ತು ಎನ್ನಲಾಗಿದೆ.