ಹೆಜಮಾಡಿಯಲ್ಲಿ ನಡೆದ ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಬದುಕಿಗೆ ಹೇಳಲಾರದಷ್ಟು ವ್ಯಾಖ್ಯಾನಗಳಿವೆ. ಶಾಸ್ತ್ರ ಮಾಹಿತಿ ಕೊಡುತ್ತದೆ. ಅದರೊಂದಿಗೆ ನಮ್ಮ ಮಾತು, ಕೃತಿಗಳು ಜತೆಯಾದಾಗ ಸಾಹಿತ್ಯ ಹೊರಹೊಮ್ಮುತ್ತದೆ. ಈ ದೇಶದ ಉನ್ನತಿಗೆ ಭಾಷೆ ಪೂರಕವಾಗಿರಬೇಕು. ನಮ್ಮ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ಹೊರ ತರುವ ಪ್ರಯತ್ನಗಳಾಗಬೇಕು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.
ಹೆಜಮಾಡಿಯಲ್ಲಿ ಶನಿವಾರ ನಡೆದ ಕಾಪು ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಕೃತಿಗಳನ್ನು ಬಿಡುಗಡೆಗೊಳಿಸಿದ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಇಂದು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಶಿಕ್ಷಕರ ನೇಮಕವಾಗುತ್ತಿಲ್ಲ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರಿಗಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಬಾಬು ಕೊರಗ ಸರ್ವಾಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಫಕೀರ್ ಮಹಮ್ಮದ್ ಕಟ್ಪಾಡಿ ಅವರಿಗೆ ಸಾಹಿತ್ಯ ಧ್ವಜ ಹಸ್ತಾಂತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಹೆಜಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ, ಅಲ್ ಅಝ್‌ಹರ್ ಶಾಲಾ ಸಂಚಾಲಕ ಶೇಖಬ್ಬ ಕೋಟೆ, ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಮೆಂಡನ್, ಉದ್ಯಮಿ ರಾಲ್ಫಿ ಡಿಕೋಸ್ಟ, ಎಲ್ಲೈಸಿ ನಿವೃತ್ತ ಅಧಿಕಾರಿ ರಾಜು, ನೀಲಾನಂದ ನಾಯ್ಕ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ ಸ್ವಾಗತಿಸಿದರು. ಕಾಪು ತಾಲೂಕು ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ ಪ್ರಾಸ್ತವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯ ನುಡಿಗಳನ್ನಾಡಿದರು. ದೀಪಕ್ ಬೀರ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಪ್ರೊ.ವಿದ್ಯಾ ಅಮ್ಮಣ್ಣಾಯ ಹಾಗೂ ಅನಂತ ಮೂಡಿತ್ತಾಯ ನಿರೂಪಿಸಿದರು. ಪವಿತ್ರಾ ಗಿರೀಶ್ ವಂದಿಸಿದರು.
ಆಕರ್ಷಕ ಶೋಭಾಯಾತ್ರೆ
ಹೆಜಮಾಡಿ ಬಸ್ ನಿಲ್ದಾಣದ ಅಶ್ವತ್ಥಕಟ್ಟೆ ಬಳಿಯಿಂದ ಸಮ್ಮೇಳನ ಸರ್ವಾಧ್ಯಕ್ಷರನ್ನು ಸ್ವಾಗತಿಸಲಾಯಿತು. ಆಕರ್ಷಕ ಕಲಾತಂಡಗಳು, ವಿವಿಧ ಸಂಘಸಂಸ್ಥೆಗಳಿಂದ ಸಮ್ಮೇಳನ ಸಭಾಂಗಣದವರೆಗೆ ಸಮ್ಮೇಳನಾಧ್ಯಕ್ಷರು ಹಾಗೂ ಕನ್ನಡ ಮಾತೆ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಡೆಯಿತು. ಗ್ರಾಪಂ ಅಧ್ಯಕ್ಷೆ ರೇಷ್ಮಾ ಮೆಂಡನ್ ರಾಷ್ಟ್ರಧ್ವಜ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠೆ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ಗುರ್ಮೆ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು.
ಕಥಾ ಸ್ವಾರಸ್ಯ ವಿಚಾರಗೋಷ್ಠಿಯಲ್ಲಿ ಪ್ರಜ್ಞಾ ಮಾರ್ಪಳ್ಳಿ ವಿಚಾರ ಮಂಡಿಸಿದರು. ಫಾತಿಮಾ ರಲಿಯಾ ಹೆಜಮಾಡಿ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ನಿವೃತ್ತ ಶಿಕ್ಷಕ ಕೃಷ್ಣಕುಮಾರ್ ಮಟ್ಟು ಸಂಯೋಜನೆಯಲ್ಲಿ ಸಿರಿಗನ್ನಡ ವಿಶೇಷ ರಸಪ್ರಶ್ನೆ, ಸ್ಥಳೀಯ ಶಾಲಾ ಮಕ್ಕಳು ಹಾಗೂ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.
ಪುಸ್ತಕ ಪ್ರದರ್ಶನದಲ್ಲಿ ಇತರೆ ವ್ಯಾಪಾರಿಗಳ ಭರಾಟೆ
ಸಾಹಿತ್ಯ ಸಮ್ಮೇಳನ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಪ್ರದರ್ಶನದಲ್ಲಿ ಕೇವಲ ಒಂದು ಮಳಿಗೆಯ ಟೇಬಲೊಂದರಲ್ಲಿ ಮಾತ್ರ ಪುಸ್ತಕ ಮಾರಾಟ ಕಂಡು ಬಂದರೆ, ಉಳಿದ ಮಳಿಗೆಗಳೆಲ್ಲ ಸಾಹಿತ್ಯ ಹೊರತಾದ ಸರಕುಗಳ ವ್ಯಾಪಾರ ಕೇಂದ್ರವಾಗಿತ್ತು. ಜನ ಅದನ್ನುಕೊಳ್ಳಲು ಮುಗಿಬಿದ್ದಿದ್ದರು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರು ಮಾತನಾಡುತ್ತಿದ್ದರೆ, ಸಭೆಯಲ್ಲಿ ಕುಳಿತಿದ್ದ ವಿದ್ಯಾರ್ಥಿ ಸಮುದಾಯ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದರು.