ಉಡುಪಿಯ ಗೀತಾಂಜಲಿ ಸಭಾಂಗಣದಲ್ಲಿ ಸಾಹಿತಿ ಫಾತಿಮಾ ರಲಿಯಾ ಅವರ 'ಅವಳ ಕಾಲು ಸೋಲದಿರಲಿ' ಪುಸ್ತಕವನ್ನು ಉದಯ್​ ಗಾಂವ್ಕರ್​ ಬಿಡುಗಡೆ ಮಾಡಿದರು. ಸುಲೋಚನಾ ಪಚ್ಚಿನಡ್ಕ, ಸಚಿನ್​ ಅಂಕೋಲಾ ಇದ್ದರು. 
ಉಡುಪಿ

ಸಾಹಿತ್ಯ, ಕಲೆಗಳಿಂದ ಮನಸ್ಸಿನ ಕಂದರ ದೂರ

* ವಿಮರ್ಶಕ ಉದಯ್​ ಗಾಂವ್ಕರ್​ ಅನಿಸಿಕೆ

* 'ಅವಳ ಕಾಲು ಸೋಲದಿರಲಿ' ಪುಸ್ತಕ ಬಿಡುಗಡೆ

ಉಡುಪಿ: ಮನಸ್ಸುಗಳ ನಡುವಿನ ಕಂದರ (ಅಂತರ) ಕಡಿಮೆ ಮಾಡಲು ಸಾಹಿತ್ಯ ಹಾಗೂ ಕಲೆಗಳಿಂದ ಸಾಧ್ಯವಿದೆ. ವ್ಯಕ್ತಿಗಳ ನಡುವೆ ಪರಸ್ಪರ ಗುಣಗಳಲ್ಲಿ ಭಿನ್ನತೆ ಇರುತ್ತದೆ. ಸಾಹಿತ್ಯ-ಸಾಹಿತಿಗೂ, ಕಲೆ-ಕಲಾವಿದನಲ್ಲೂ ಭಿನ್ನತೆ ಅಥವಾ ಸಾಮ್ಯತೆ ಇರಬಹುದು. ಆದರೆ, ಸಾಹಿತಿ ಫಾತಿಮಾ ರಲಿಯಾ ಅವರು ಅವರ ಕವಿತೆಗಳಿಗಿಂತ ಭಿನ್ನವಾಗಿಲ್ಲ. ಜೀವನದಲ್ಲಿ ಎಲ್ಲರ ಕೈಗಳಿಗೆ ಶ್ರೇಷ್ಠತೆ ಇದೆ. ಅಷ್ಟೇ ಸಹಕರಿಸಿದ ಕಾಲುಗಳನ್ನು ಮರೆಯಬಾರದು ಎಂದು ವಿಮರ್ಶಕ, ವಿಜ್ಞಾನ ಶಿಕ್ಷಕ ಉದಯ್​ ಗಾಂವ್ಕರ್​ ಕುಂದಾಪುರ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಶನಿವಾರ (ಫೆ.14) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಸಾಹಿತಿ ಫಾತಿಮಾ ರಲಿಯಾ ಅವರ 'ಅವಳ ಕಾಲು ಸೋಲದಿರಲಿ' ಎಂಬ ಕವನ ಸಂಕಲನದ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ವಾಸ್ತವ ಅಂಶ ಪ್ರತಿಪಾದನೆ

ಪುಸ್ತಕದ ಕುರಿತು ಕಾರ್ಕಳದ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಮಾತನಾಡಿ, 30 ಕವಿತೆಯನ್ನೊಳಗೊಂಡ ಈ ಪುಸ್ತಕ ಶೀರ್ಷಿಕೆಯೇ ಕುತೂಹಲಕಾರಿಯಾಗಿದೆ. ಇಲ್ಲಿ ನೆಲ್ಲ ಕವಿತೆಗಳನ್ನೂ ಓದಿಸಿಕೊಂಡು ಹೋಗುತ್ತದೆ. ಇದು ರಲಿಯಾ ಅವರ ಬರವಣಿಗೆಯ ಶಕ್ತಿಯಾಗಿದೆ. ಏನು ಹೇಳಬೇಕೋ ಅದನ್ನು ಸ್ಪಷ್ಟವಾಗಿ ಕವನದಲ್ಲಿ ಹೇಳುತ್ತಾರೆ. ಎಂಬಿಎ ಕಲಿತಿರುವ ಅವರು, ಸುಂದರವಾದ ಕನ್ನಡ ಪದಗಳಿಂದ ಕವನವನ್ನು ಹೆಣೆಯುತ್ತಾರೆ. ಅವರ ಕವನಗಳು ಸಾಮಾಜಿಕ ಚಿಂತನೆ ಹಾಗೂ ಕಲ್ಪನೆಗಿಂತ ಹೆಚ್ಚು ವಾಸ್ತವ ಅಂಶ ಪ್ರತಿಪಾದಿಸುತ್ತವೆ. ಸಾಂಸಾರಿಕ ಅನುಭವ, ಒಳ್ಳೆದು-ಕೆಟ್ಟದ್ದು ಎರಡನ್ನೂ ಚಿತ್ರಿಸುತ್ತಾರೆ. ಯೋಚಿಸಿದ್ದನ್ನು ಕವಿತೆಗಳಲ್ಲಿ ಪೋಣಿಸುತ್ತಾರೆ ಎಂದರು.
ವಿಜಯಾ ದಬ್ಬೆ ಅವರು ಸ್ತ್ರೀ ಚಿಂತನೆ ಕುರಿತು ರಚಿಸಿದ ಆಶಯಗೀತೆಯನ್ನು ರಾಮಾಂಜಿ ಹಾಡಿದರು. ಸಾಹಿತಿ ಫಾತಿಮಾ ರಲಿಯಾ ಪ್ರಸ್ತಾವಿಕವಾಗಿ ಮಾತನಾಡಿದರು. ಸಚಿನ್​ ಅಂಕೋಲಾ ಕಾರ್ಯಕ್ರಮ ನಿರ್ವಹಿಸಿದರು. ಇದೇ ವೇಳೆ 'ಅವಳ ಕಾಲು ಸೋಲದಿರಲಿ' ಪುಸ್ತಕದ ಕುರಿತು ಸಾಹಿತಿಯೊಂದಿಗೆ ಸಂವಾದವೂ ನಡೆಯಿತು.
"

ಪುರಾಣ ಕಾಲದಿಂದ ಈ ಗಳಿಗೆಯ ವರೆಗೂ ಮಹಿಳೆ ಅನುಭವಿಸುತ್ತಿರುವ ಸಮಸ್ಯೆ, ನೋವು ಒಂದಿಷ್ಟೂ ಕಡಿಮೆಯಾಗಿಲ್ಲ. ಮಹಿಳೆಯರನ್ನು ಕಾಡುತ್ತಿರುವ ಆತಂಕ, ಅಸಹಾಯಕತೆಯೇ ಈ ಪುಸ್ತಕದ ಸಾರ. ಎಲ್ಲ ದುಗುಡಗಳನ್ನೂ ಮೀರಿ ಬದುಕುವುದೇ ನನಗೆ ಅಥವಾ ನನ್ನಂತಹ ಮಹಿಳೆಯರಿಗೆ ನಿತ್ಯ ಚಳವಳಿಯಾಗಿದೆ. 'ಅವಳ ಕಾಲು ಸೋಲದಿರಲಿ' ಕವನ ಬರೆಯುವಾಗ ನನ್ನ ಕೈ ಸೋತಿರಲಿಲ್ಲ.