ಕೆಸರುಮಯ ರಸ್ತೆಯಲ್ಲಿ ಸಾಹಸದ ಸಂಚಾರ.
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮೀನುಗಾರರು ನಿತ್ಯದ ಕಾಯಕಕ್ಕಾಗಿ ಸಂಚರಿಸುವ ಪ್ರಮುಖ ರಸ್ತೆಯಾಗಿರುವ ಗಂಗೊಳ್ಳಿ ಹಾಗೂ ಗುಜ್ಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಗುಡ್ಡೆ ಮಡಿ ಲೈಟ್‌ಹೌಸ್ ರಸ್ತೆ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ. ದಶಕಗಳಿಂದ ಸಮಸ್ಯೆ ಎದುರಾಗಿದ್ದರೂ ಶಾಶ್ವತ ಪರಿಹಾರ ಮಾತ್ರ ಇನ್ನೂ ದೊರಕಿಲ್ಲ.
ಮುಂಜಾನೆ ಮೀನುಗಾರಿಕೆಗೆ ತೆರಳುವ ಮೀನುಗಾರರು ಇದೇ ಕೆಸರುಮಯ ರಸ್ತೆಯನ್ನು ಅವಲಂಬಿಸಬೇಕಾಗಿದೆ. ನೂರಾರು ಮಂದಿ ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕಾಯಕದ ಅನಿವಾರ್ಯತೆಯಿಂದಾಗಿ ಸಮಸ್ಯೆ ನಡುವೆಯೇ ಸಾಗಬೇಕಾದ ಪರಿಸ್ಥಿತಿ ಇಲ್ಲಿದೆ. ಆದರೆ ಸ್ಥಳೀಯಾಡಳಿತದಿಂದ ಈವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸ್ಥಳೀಯರ ಆರೋಪ.
ನಿತ್ಯ ನೂರಾರು ಜನರ ಓಡಾಟ
ಗಂಗೊಳ್ಳಿ ಲೈಟ್‌ಹೌಸ್ ಮಡಿ ಕಡಲತೀರ ರಸ್ತೆಯಲ್ಲಿ ಮೀನುಗಾರರು, ಮೀನು ವ್ಯಾಪಾರ ಮಾಡುವ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿದಿನ ಸಂಚರಿಸುತ್ತಾರೆ. ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕೆಸರು, ನೀರು ನಿಂತು ಉಂಟಾಗುವ ಹೊಂಡ- ಗುಂಡಿಗಳಿಂದಾಗಿ ರಸ್ತೆ ಸಂಪೂರ್ಣ ಹದಗೆಡುತ್ತಿದೆ. ಮೀನುಗಾರಿಕೆಗೆ ಮುಂಜಾನೆ ತೆರಳುವವರು ಕತ್ತಲಿನಲ್ಲೇ ನೀರು ನಿಂತಿರುವ ಗುಂಡಿಗಳನ್ನು ದಾಟಿ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ರಸ್ತೆ ಸಮಸ್ಯೆ ಕುರಿತು ಸ್ಥಳೀಯಾಡಳಿತದ ಗಮನಕ್ಕೆ ಹಲವು ಬಾರಿ ತರಲಾಗಿದ್ದರೂ ಪರಿಹಾರ ಕ್ರಮಗಳು ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗಿವೆ. ಶಾಶ್ವತ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಮೀನುಗಾರರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜನರೇ ಹಾಕಿದ ಕ್ರಷರ್ ಪುಡಿ
ರಸ್ತೆ ದುಸ್ಥಿತಿಯಿಂದ ಬೇಸತ್ತ ಮೀನುಗಾರರು ಹಾಗೂ ಮೀನು ವ್ಯಾಪಾರಿಗಳು ಕೆಲವು ತಿಂಗಳ ಹಿಂದೆ ತಮ್ಮ ಸ್ವಂತ ಹಣದಲ್ಲಿ ಕ್ರಷರ್ ಪುಡಿಕಲ್ಲು ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು. ಆದರೆ ಈಗ ಅದು ಕೂಡ ಮಣ್ಣಿನೊಂದಿಗೆ ಬೆರೆತು ಮತ್ತೆ ರಸ್ತೆ ಕೆಸರುಮಯವಾಗಿದೆ.
ನಿತ್ಯವೂ ನೂರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮಳೆಗಾಲದಲ್ಲಿ ಇದೇ ಕೆಸರುಮಯ ರಸ್ತೆಯಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಕುರಿತು ಹಲವು ಬಾರಿ ಸ್ಥಳೀಯಾಡಳಿತದ ಗಮನಕ್ಕೆ ತಂದರೂ ಕೇವಲ ತಾತ್ಕಾಲಿಕ ದುರಸ್ತಿ ಕಾರ್ಯಗಳಿಗೆ ಮಾತ್ರ ಸೀಮಿತವಾಗಿದೆ. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕು.
— ವಿಶ್ವನಾಥ ಗಂಗೊಳ್ಳಿ ಸಾಮಾಜಿಕ ಕಾರ್ಯಕರ್ತ