ಮುಳುಗುತಜ್ಞ ಈಶ್ವರ ಮಲ್ಪೆ ಅವರಿಗೆ ಜೀವರಕ್ಷಕ ಸಂವಹನ ಸಾಧನ ಹಸ್ತಾಂತರಿಸಲಾಯಿತು. ಡೆನಿಸ್ ಡೆಸಾ, ಒಸ್ವಲ್ಡ್ ರೊಡ್ರಿಗಸ್, ಆಲ್ವಿನ್ ಸಿಕ್ವೇರಾ, ಸಿಸ್ಟರ್ ಸುಶ್ಮಾ, ಸ್ವೀವನ್ ಪಿಂಟೊ, ಲವೀನಾ ಫೆರ್ನಾಂಡಿಸ್ ಇತರರಿದ್ದರು.
* ತೊಟ್ಟಂ ಚರ್ಚ್ನ ಡೆನಿಸ್ ಡೆಸಾ ಅಭಿಪ್ರಾಯ
* ಜೀವರಕ್ಷಕ ಸಂವಹನ ಸಾಧನ ಹಸ್ತಾಂತರ
ಉಡುಪಿ: ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನಲ್ಲಿ ಮುಳುಗಿದವರ ರಕ್ಷಣೆ ಕಾರ್ಯಾಚರಣೆ ಅಥವಾ ಶವ ಮೇಲೆತ್ತುವ ಕಾರ್ಯದ ಮೂಲಕ ಈಶ್ವರ್ ಮಲ್ಪೆ ಅವರು ನೋವಿನಲ್ಲಿರುವ ಕುಟುಂಬದವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ. ಕಷ್ಟದಲ್ಲಿರುವವರ ನೋವಿಗೆ ದನಿಯಾಗುವ ಅವರು ಅನುಭವಿಸುವ ಕಷ್ಟ ನಿವಾರಿಸುವುದು ಮಾನವೀಯತೆಯಾಗಿದೆ. ಅಂತಹ ಸೇವೆಯನ್ನು ದೇವರೂ ಸಹ ಮೆಚ್ಚುತ್ತಾನೆ ಎಂದು ಸಂತ ಅನ್ನಮ್ಮ ಚರ್ಚ್ನ ಧರ್ಮಗುರು ವಂ. ಡೆನಿಸ್ ಡೆಸಾ ಅಭಿಪ್ರಾಯಪಟ್ಟರು.
ಮಲ್ಪೆಯ ತೊಟ್ಟಂ ಚರ್ಚ್ನ ಆವರಣದಲ್ಲಿ ಮಂಗಳೂರಿನ ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಭಾನುವಾರ (ಮಾ.8) ನೀಡಿದ ಸುಮಾರು 7 ಲಕ್ಷ ರೂ. ವೆಚ್ಚದ ನೀರಿನಡಿ ಮುಳುಗಿ ಜೀವರಕ್ಷಣೆ ಕಾರ್ಯಕ್ಕೆ ಬಳಸುವ ಸಂವಹನ ಸಾಧನ ಹಸ್ತಾಂತರಿಸಿ ಮಾತನಾಡಿದರು.
ನನ್ನ ಜೀವಕ್ಕೂ ಅಪಾಯ
ಈಶ್ವರ್ ಮಲ್ಪೆ ಮಾತನಾಡಿ, ನೀರಿಗೆ ಬಿದ್ದು ಮೃತಪಟ್ಟವರ ದೇಹ ತೆಗೆಯಲು ಕೆಲವೊಮ್ಮೆ 30ರಿಂದ 40 ಅಡಿ ಆಳಕ್ಕೆ ಹೋಹಬೇಕಾಗುತ್ತದೆ. ಈ ಸಂದರ್ಭದಲ್ಲಿ ನನಗೆ ಸಹಕರಿಸಲು ಮೇಲೆ ನಿಂತವರ ಜತೆ ಸಂಪರ್ಕ ಮಾಡಲು ಹಗ್ಗದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು. ಆದರೆ, ಇದು ಸೂಕ್ತ ವ್ಯವಸ್ಥೆ ಅಲ್ಲ. ಎಷ್ಟೋ ಬಾರಿ ನನ್ನ ಜೀವಕ್ಕೂ ಅಪಾಯವಾಗಿದ್ದು, ಜನರ ಪ್ರಾರ್ಥನೆ ಮತ್ತು ಹಾರೈಕೆಯಿಂದ ಸುರಕ್ಷಿತವಾಗಿ ಮೇಲೆ ಬರಲು ಸಾಧ್ಯವಾಗಿದೆ. ಮೈಕಲ್ ಡಿಸೋಜಾ ಅವರ ಕೊಡುಗೆ, ಹೃದಯ ವೈಶಾಲ್ಯತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್ ಸಿಕ್ವೇರಾ, ಸ್ಥಳೀಯ ಕಾನ್ವೆಂಟ್ನ ಸುಪೀರಿಯರ್ ಸಿಸ್ಟರ್ ಸುಶ್ಮಾ, ಚಾರಿಟೇಬಲ್ ಟ್ರಸ್ಟ್ನ ಸದಸ್ಯರಾದ ಸ್ವೀವನ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ಶಾಂತಿ ಫೆರ್ನಾಂಡಿಸ್, ಚರ್ಚ್ನ ಸ್ತ್ರೀ ಸಂಘಟನೆಯ ಅಧ್ಯೆ ಪ್ರಿಯಾ ರೊಡ್ರಿಗಸ್, ಈಶ್ವರ್ ಮಲ್ಪೆ ತಂಡದ ಸದಸ್ಯರು ಉಪಸ್ಥಿತರಿದ್ದರು.
ತನ್ನ ಜೀವದ ಹಂಗು ತೊರೆದು ಇನ್ನೊಬ್ಬರ ಜೀವ ರಸಲು ಧಾವಿಸುವ ಈಶ್ವರ್ ಮಲ್ಪೆ ಕಾರ್ಯ ಅತ್ಯಂತ ಶ್ರೇಷ್ಠ ಹಾಗೂ ಪುಣ್ಯದ ಕಾರ್ಯ. ಇದೀಗ ಅವರು ಈ ಸಂಹನ ಸಾಧನ ಮೂಲಕ ನೀರಿನೊಳಗಿನಿಂದಲೇ ಮೇಲೆ ನಿಂತವರ ಬಳಿ ಮಾತನಾಡಬಹುದು. ಅವರ ಮನೆ ಹಳೆಯದಾಗಿದ್ದು ಹೊಸ ಮನೆ ನಿರ್ಮಿಸಲೂ ಸಹ ಮೈಕಲ್ ಡಿಸೋಜಾ ಮುಂದಿನ ದಿನಗಳಲ್ಲಿ ಸಹಾಯಹಸ್ತ ನೀಡಲಿದ್ದಾರೆ.