ವಾರ್ ಅಗೈನ್ಸ್ಟ್ ಡ್ರಗ್ಸ್ ಕಾರ್ಯಕ್ರಮವನ್ನು ಶಾಸಕ ವಿ.ಸುನೀಲ್ ಕುಮಾರ್ ಉದ್ಘಾಟಿಸಿದರು. ಪ್ರಮುಖರಾದ ಡಾ.ಸಂದೀಪ್ ಕುಡ್ವ, ವಿಜಯ್ ಪ್ರಸಾದ್, ಗಿರಿಜಮ್ಮ, ಮಂಜುನಾಥ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಕಳ: ದೇಶದ ಅತಿದೊಡ್ಡ ಆಸ್ತಿ ಯುವ ಜನತೆ. ಆದರೆ ಇಂದು ಯುವ ಸಮುದಾಯವನ್ನು ಮಾದಕವಸ್ತುವಿನ ಟಾರ್ಗೆಟ್ ಮಾಡುವ ಕೆಲಸವಾಗುತ್ತಿದೆ. ಯಾವುದೋ ಆಕರ್ಷಣೆ, ಮನೋರಂಜನೆ, ಸುಖಕ್ಕೆ ಒಳಗಾಗಿ ಮಾದಕ ವಸ್ತು ವ್ಯಸನಕ್ಕೆ ಯುವ ಜನತೆ ಬಲಿಯಾಗಿ ತಮ್ಮ ಜೀವನವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ಒಬ್ಬ ವ್ಯಸನಕ್ಕೆ ಒಳಗಾದರೆ ಆತ ಮಾತ್ರ ಬಲಿಯಾಗುವುದಲ್ಲ ಜತೆಗೆ ಇಡೀ ಕುಟುಂಬ ಹಾಗೂ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪ ವಿಭಾಗ ವತಿಯಿಂದ ಮಂಜುನಾಥ್ ಪೈ ಸಭಾಂಗಣದಲ್ಲಿ ಬುಧವಾರ ಜರುಗಿದ ಕಾರ್ಕಳ ತಾಲೂಕು ಮಟ್ಟದ ವಾರ್ ಅಗೈನ್ಸ್ಟ್ ಡ್ರಗ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಮಾತನಾಡಿದರು. ಕಾರ್ಕಳ ಉಪ ವಿಭಾಗ ಡಿವೈಎಸ್ಪಿ ವಿಜಯ್ ಪ್ರಸಾದ್ ಪ್ರಾಸ್ತಾವಿಕ ಮಾತನಾಡಿದರು.
ಶಿಕ್ಷಣಾಧಿಕಾರಿ ಗಿರಿಜಮ್ಮ, ಉಪ ತಹಸೀಲ್ದಾರ್ ಮಂಜುನಾಥ್ ನಾಯಕ್, ನಿಟ್ಟೆ ವಿದ್ಯಾಸಂಸ್ಥೆಯ ಯೋಗೀಶ್ ಹೆಗ್ಡೆ, ನಗರ ಠಾಣಾ ಉಪನಿರೀಕ್ಷಕ ಶಿವಕುಮಾರ್ ಎಸ್.ಆರ್., ಗ್ರಾಮಾಂತರ ಠಾಣೆಯ ಪಿಎಸ್‌ಐ ನವೀನ್, ಅಜೆಕಾರ್ ಪಿಎಸ್‌ಐ ಲೋಹಿತ್, ಪ್ರೊಬೆಷನರಿ ಎಸ್‌ಐ ಸೀಮಾ ಅಂಜುಮ್ ಮತ್ತಿತರರು ಉಪಸ್ಥಿತರಿದ್ದರು. ವೃತ್ತ ನಿರೀಕ್ಷಕ ಸಂದೀಪ್ ಜಿ.ಎಸ್. ಸ್ವಾಗತಿಸಿದರು. ಎಎಸ್‌ಐ ಗಣೇಶ್ ಪ್ರಾರ್ಥಿಸಿದರು. ಗ್ರಾಮಾಂತರ ಠಾಣಾ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ವಂದಿಸಿದರು.
ಮಾದಕ ವಸ್ತುವನ್ನು ಸಮಾಜದಿಂದ ಕಿತ್ತು ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಗಲು-ರಾತ್ರಿ ಶ್ರಮಿಸುತ್ತಿದೆ. ಎಲ್ಲರೂ ಈ ಬಗ್ಗೆ ಜಾಗೃತರಾಗಿ ಡ್ರಗ್ಸ್ ಪಿಡುಗು ನಿವಾರಿಸಲು ಕೈ ಜೋಡಿಸಬೇಕಾಗಿದೆ. ಡ್ರಗ್ಸ್ ಚಟದಲ್ಲಿ ಕರಾವಳಿ ಭಾಗ ಮೂರನೇ ಸ್ಥಾನದಲ್ಲಿರುವುದು ಆಘಾತಕಾರಿ. ಯುವ ಶಕ್ತಿಗೆ ಹಾನಿ ಮಾಡಿದರೆ ದೇಶದ ಬೆಳವಣಿಗೆಗೆ ಹೊಡೆತ ನೀಡಿದಂತೆ. ನಾವು ಜಾಗೃತರಾಗದಿದ್ದಲ್ಲಿ ಮುಂದೆ ಕೆಟ್ಟ ದಿನಗಳನ್ನು ನೋಡಬೇಕಾಗುತ್ತದೆ. ಮಾದಕ ವಸ್ತು ಸೇವೆನೆ ಮಾಡುವವರೂ ಹಾಗೂ ಹೊಂದಿರುವವರೂ ಅಪರಾಧಿಗಳಾಗಿ ಶಿಕ್ಷೆಗೆ ಒಳಗಾಗುತ್ತಾರೆ. ಡ್ರಗ್ಸ್‌ಮುಕ್ತ ಸಮಾಜ ನಿರ್ಮಾಣದಲ್ಲಿ ನಾವೆಲ್ಲ ಜತೆಯಾಗಬೇಕಾಗಿದೆ. ಅಪರಾಧವನ್ನು ನೋಡಿ ಸುಮ್ಮನಿರುವುದು ಕೂಡ ಒಂದು ಅಪರಾಧ.
— ವಿಜಯ್ ಪ್ರಸಾದ್ ಕಾರ್ಕಳ ಉಪ ವಿಭಾಗ ಡಿವೈಎಸ್ಪಿ