ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪ್ರವಚನ ನೀಡಿದರು. ಮಠದ ದಿವಾನ ಸುದರ್ಶನ ಜೋಯಿಸ್, ಕಲಾವಿದ ಯಜ್ಞೇಶ್ ಆಚಾರ್, ನಿವೃತ್ತ ಮುಖ್ಯಗುರು ಶ್ರೀಕೃಷ್ಣ ಶರ್ಮ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಸಾಧನೆಯು ಮನುಷ್ಯನ ಗುರುತರ ಧ್ಯೇಯವಾಗುತ್ತದೆ. ಬದುಕಿನಲ್ಲಿ ಭಗವಂತನ ಚಿಂತನೆ ಮಾಡಿದರೆ ಮಾನಸಿಕ ನೆಮ್ಮದಿ ದೊರಕುತ್ತದೆ. ಜೀವನದಲ್ಲಿ ಅಭ್ಯುದಯವಾಗಲು ಭಗವಂತನ ಆರಾಧನೆ ಮುಖ್ಯ. ಧಾರ್ಮಿಕ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನವು ಸುಖಮಯವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
30ನೇ ವರ್ಷದ ಚಾತುರ್ಮಾಸ್ಯ ವ್ರತಾಚಾರಣೆ ಪ್ರಯುಕ್ತ ಶ್ರೀಮಠದ ಅನಿರುದ್ಧ ತೀರ್ಥ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವದಲ್ಲಿ ‘ಸಕಾಲಿಕ ಬದುಕಿಗೆ ಧಾರ್ಮಿಕ ಚಿಂತನೆ’ ಕುರಿತು ಪ್ರವಚನ ನೀಡಿದರು.
ಕಲಾರತ್ನ ಶಂ.ನ.ಅಡಿಗ ಕುಂಬಳೆ ಅವರಿಂದ ಹರಿಕಥಾ ಸತ್ಸಂಗ ‘ಯೋಗ ಕ್ಷೇಮಮ್ ವಹಾಮ್ಯಹಮ್’ ನೆರವೇರಿತು. ಹಿಮ್ಮೇಳದಲ್ಲಿ ರವಿಚಂದ್ರ ಸೂರಂಬೈಲು ಮತ್ತು ಜಗದೀಶ್ ಉಪ್ಪಳ ಸಹಕಾರ ನೀಡಿದರು.
ಮಠದ ದಿವಾನ ಸುದರ್ಶನ ಜೋಯಿಸ್, ಕಾರ್ಯಕ್ರಮ ಸಂಯೋಜಕ ಕಲಾವಿದ ಕೆ.ಯಜ್ಞೇಶ್ ಆಚಾರ್, ಪ್ರಮುಖರಾದ ಮಧುಸೂದನ ಕಲ್ಲೂರಾಯ, ರಾಘವೇಂದ್ರ ಆಚಾರ್ ಕೆ., ಚಿದಾನಂದ ಭಟ್, ನಿವೃತ್ತ ಮುಖ್ಯಗುರು ಶ್ರೀಕೃಷ್ಣ ಶರ್ಮ, ಮಠದ ರವೀಂದ್ರ ಭಟ್, ಸುಹಾಸ್ ಉಪಾಧ್ಯಾಯ ದೇವರಗದ್ದೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ಮುಖ್ಯಗುರು ಸತ್ಯಶಂಕರ ಭಟ್ ಎಂ. ನಿರೂಪಿಸಿದರು.