ಉಡುಪಿಯ ಶ್ರೀವಿದ್ಯಾ ಲಲಿತಕಲಾ ಸಂಗೀತ ಶಾಲೆಯ ಕಲೋತ್ಸವದಲ್ಲಿ ಸಂಗೀತ ಗುರುಗಳನ್ನು ಸನ್ಮಾನಿಸಲಾಯಿತು. ಉಮಾಶಂಕರಿ, ಬಾಲಚಂದ್ರ ಭಾಗವತ, ವೀಣಾ ಹತ್ವಾರ, ಮುರಳೀಧರ ಭಟ್ಟ, ಮಾಯಗುಂಡಿ ಮಾಧವ ಭಟ್ಟ, ಮಾಧವ ಉಪಾಧ್ಯ ಇದ್ದರು. 
ಉಡುಪಿ

ಸಂಗೀತ ಸಾಧನೆಯಿಂದ ಜೀವನ ಸಾರ್ಥಕ

* ವಿದುಷಿ ಉಮಾಶಂಕರಿ ಅಭಿಮತ
* ವಿದ್ಯಾನಿಧಿ ಕಲಾ ಶಾಲೆಯ ಕಲೋತ್ಸವ

ಉಡುಪಿ: ಮನುಷ್ಯರಾಗಿ ಹುಟ್ಟಿದ ಮೇಲೆ ಯಾವುದಾದರೊಂದು ಕಲೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾಹಿತ್ಯ, ನೃತ್ಯ, ಸಂಗೀತದಂತಹ ಕಲೆಗಳಿಂದ ಮನಸ್ಸು ಧನಾತ್ಮಕವಾಗಿರುವುದಲ್ಲದೆ, ಜೀವನ ಸಾರ್ಥಕವಾಗುತ್ತದೆ ಎಂದು ಸಂಗೀತ ವಿದುಷಿ ಉಮಾಶಂಕರಿ ಅಭಿಮತ ವ್ಯಕ್ತಪಡಿಸಿದರು.
ಉಡುಪಿಯಲ್ಲಿ ವಿದ್ಯಾನಿಧಿ ಸಮಿತಿ (ರಿ.) ಆಶ್ರಯದಲ್ಲಿ ವಿದ್ಯಾದೇಗುಲದಲ್ಲಿ ಆಯೋಜಿಸಿದ್ದ ಶ್ರೀವಿದ್ಯಾ ಲಲಿತಕಲಾ ಸಂಗೀತ ಶಾಲೆಯ ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

'ಸಂಗೀತ ಕಲೋಪಾಸಕಿ' ಬಿರುದು

ಸಂಸ್ಥೆಯ ವಾರ್ಷಿಕೋತ್ಸವದ ನಿಮಿತ್ತ ಸಂಗೀತ ವಿದುಷಿ ಉಮಾಶಂಕರಿ ಅವರಿಗೆ 'ಸಂಗೀತ ಕಲೋಪಾಸಕಿ' ಬಿರುದಿನೊಂದಿಗೆ ಸನ್ಮಾನಿಸಲಾಯಿತು. ವಿದ್ಯಾಸಂಸ್ಥೆಯ ಓರ್ವ ದಾನಿ ಸರೋಜಾ  ಹಾಗೂ 9 ಗುರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರಾಂಶುಪಾಲ ವಿದ್ವಾನ್​ ಬಾಲಚಂದ್ರ ಭಾಗವತ ಉಪಸ್ಥಿತರಿದ್ದರು.
ಸಂಸ್ಥೆಯ ವೇದ ತರಗತಿಯ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಅಧ್ಯಕ್ಷೆ ವೀಣಾ ಹತ್ವಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಳೀಧರ ಭಟ್ಟ ವಂದಿಸಿದರು.

ಮನರಂಜನಾ ಕಾರ್ಯಕ್ರಮ

ಸಭಾ ಕಾರ್ಯಕ್ರಮದ ಬಳಿಕ ಶಾಲೆಯ ವಿದ್ಯಾರ್ಥಿಗಳಿಂದ ಕರ್ನಾಟಕ ಸಂಗೀತ, ವೀಣಾ ವಾದನ, ತಬಲಾ ವಾದನ, ವಾಯೋಲಿನ್​, ಭರತನಾಟ್ಯ ಪ್ರಸ್ತುತಿ ಹಾಗೂ ಚಿತ್ರಕಲಾ ಪ್ರದರ್ಶನ ನಡೆಯಿತು. ಪ್ರಣವಿ ಸಭಾ ಕಾರ್ಯಕ್ರಮ ಮತ್ತು ಶ್ರೀಪಾದ ಹೆಬ್ಬಾರ್​ ಮನರಂಜನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾನಿಧಿ ಸಮಿತಿಯ ಗೌರವಾಧ್ಯಕ್ಷ ಮಾಯಗುಂಡಿ ಮಾಧವ ಭಟ್ಟ, ಸ್ಥಾಪಕ ಅಧ್ಯಕ್ಷ ಮಾಧವ ಉಪಾಧ್ಯ, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು.