ಕಾರ್ಕಳ: ಮದ್ಯವ್ಯಸನಿಗಳು ಸ್ವಪ್ರೇರಣೆಯಿಂದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬೇಕು. ಮದ್ಯಪಾನ ತ್ಯಜಿಸಿ ಉತ್ತಮ ಜೀವನ ನಡೆಸಲು ಶಿಬಿರಾರ್ಥಿಗಳು ದೃಢ ಸಂಕಲ್ಪ ಕೈಗೊಳ್ಳಬೇಕು ಎಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ಭಟ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕಾರ್ಕಳ, ಜನಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ 2123ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು, ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿದರು. ಶಿಬಿರದ ರಾಜ್ಯ ಸಂಘಟನಾ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಸಲಹೆ ನೀಡಿದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ಬಂಗೇರ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ, ನಿಯೋಜಿತ ಅಧ್ಯಕ್ಷ ವೃಷಭರಾಜ್ ಕಡಂಬ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಮಹಾವೀರ್ ಜೈನ್, ಹರೀಶ್ಚಂದ್ರ ತೆಂಡೂಲ್ಕರ್, ಕಮಲಾಕ್ಷ ನಾಯಕ್ ಜಾರ್ಕಳ, ತಾರನಾಥ್ ಶೆಟ್ಟಿ ಹಿರ್ಗಾನ, ವಲಯಾಧ್ಯಕ್ಷ ವಾಸು ಶೆಟ್ಟಿ, ಕೋಶಾಧಿಕಾರಿ ಉದಯ್ ವಿ.ಶೆಟ್ಟಿ, ಶಿಬಿರಾಧಿಕಾರಿ ದೇವಿಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕಿ ಜಯಲಕ್ಷ್ಮೀ ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿದರು. ಯೋಜನೆ ಮೇಲ್ವಿಚಾರಕರಾದ ಗೀತಾ ಹೆಗ್ಡೆ ನಿರೂಪಿಸಿದರು. ದಿನೇಶ್ ಹೆಗ್ಡೆ ವಂದಿಸಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ನಡೆಯುತ್ತಿರುವ ಮದ್ಯವರ್ಜನ ಶಿಬಿರದಿಂದಾಗಿ ಲಕ್ಷಾಂತರ ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಂಡಿವೆ. ಪೆರ್ವಾಜೆ ದೇವಸ್ಥಾನದ ಸಭಾಂಗಣದಲ್ಲಿ 8 ದಿನ ನಡೆಯಲಿರುವ ಶಿಬಿರದಲ್ಲಿ ಮದ್ಯವ್ಯಸನಿಗಳು ಸ್ವ ಇಚ್ಛೆಯಿಂದ ಪಾಲ್ಗೊಂಡು ದುಶ್ಟಟ ಬಿಟ್ಟು ಹೊಸ ಜೀವನ ರೂಪಿಸಿಕೊಳ್ಳಬೇಕು.ವಿಜಯ ಶೆಟ್ಟಿ ಅಧ್ಯಕ್ಷ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ