* ಕರಾವಳಿ ಕಾವಲು ಪೊಲೀಸ್ ಪಡೆ ಸೂಚನೆ
* ಮಾಲೀಕರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ
ಉಡುಪಿ: ಕರಾವಳಿ ಕಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಲಕ್ರೀಡೆಗಳ ಬೋಟ್ ನಡೆಸಲು ನಿಗದಿತ ಇಲಾಖೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ. ನಿಯಮ ಬಾಹಿರವಾಗಿ ವಾಟರ್ ಸ್ಪೋರ್ಟ್ಸ್ ನಡೆಸಿದರೆ ಹಾಗೂ ಪ್ರವಾಸಿಗರ ಜೀವಕ್ಕೆ ಅಪಾಯವಾದರೆ ಸಂಬಂಧಪಟ್ಟ ಜಲಕ್ರೀಡೆಯ ಬೋಟ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿ ಕಾವಲು ಪೊಲೀಸ್ ಪಡೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು 227 ಜಲಕ್ರೀಡೆ ಬೋಟ್ ಮಾಲೀಕರ ಸಂಖ್ಯೆ ಇದ್ದು, ಅದರಲ್ಲಿ 42 ಮಂದಿ ಮಾತ್ರ ಪರವಾನಗಿ ಹೊಂದಿದ್ದರು. 185 ಮಾಲೀಕರು ಪರವಾನಗಿ ಪಡೆಯುವುದು ಬಾಕಿ ಇತ್ತು. ಈ ಕುರಿತು ಜಿಲ್ಲೆಯಲ್ಲಿರುವ 9 ಕರಾವಳಿ ಕಾವಲು ಪೊಲೀಸ್ ಠಾಣೆಗಳಲ್ಲಿ ಬೋಟ್ ಮಾಲೀಕರು, ಚಾಲಕರ ಸಭೆ ನಡೆಸಿ ಸೂಚನೆ ನೀಡಲಾಗಿತ್ತು. ಇದೀಗ ಒಟ್ಟು 227 ಬೋಟ್ ಮಾಲೀಕರಲ್ಲಿ 151 ಮಾಲೀಕರು ಪರವಾನಗಿ ಪಡೆದಿದ್ದು, 76 ಮಾಲೀಕರುಗಳ ಲೈಸೆನ್ಸ್ ನವೀಕರಣ ಬಾಕಿ ಇದೆ ಎಂದು ಇಲಾಖೆ ತಿಳಿಸಿದೆ.
ಪರವಾನಗಿ ಮಾಡಿಸಿಕೊಳ್ಳಲು ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಆದರೂ ನವೀಕರಣ ಮಾಡಿದ ಬಗ್ಗೆ ಇದುವರೆಗೂ ಬಾಕಿ ಮಾಲೀಕರು ಮಾಹಿತಿ ನೀಡಿಲ್ಲ. ತ್ವರಿತವಾಗಿ ಲೇಸೆನ್ಸ್ ನವೀಕರಣ ಮಾಡಿಕೊಳ್ಳದಿದ್ದಲ್ಲಿ ಸಂಬಂಧಪಟ್ಟ ಜಲಕ್ರೀಡೆ ಬೋಟ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರಾವಳಿ ಕಾವಲು ಪೊಲೀಸ್ ಪಡೆಯ ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಪಣಾ ಪಟ್ಟಿ ಸಲ್ಲಿಕೆ
ಕೋಡಿಬೇಂಗ್ರೆ ಡೆಲ್ಟಾ ಬೀಚ್ನಲ್ಲಿ 2026ರ ಜ.26ರಂದು ಬೆಂಗಳೂರಿನಿಂದ ಆಗಮಿಸಿದ್ದ ಸುಮಾರು 28 ಪ್ರವಾಸಿಗರು ಸುಹಾಸ್ ಮತ್ತು ಸೂಫಿಯಾ ಎಂಬವರ ಬೋಟ್ನಲ್ಲಿ ಪಡುಕೆರೆ ಡಾನ್ ವಿವ್ಯೂ ವೀಸಿ ಮರಳಿ ಬರುವಾಗ ಕನ್ಯಾನ ಗ್ರಾಮ ಬಳಿ ಸಮುದ್ರದಲ್ಲಿ (ಡೆಲ್ಟಾ ಬೀಚ್ ಕ್ರಾಸ್) ನೀರಿನ ರಭಸಕ್ಕೆ ಬೋಟ್ ಮಗುಚಿ ಬಿದ್ದು ಸಿಂಧೂ ಹಾಗೂ ಶಂಕರಪ್ಪ ಎಂಬಿಬ್ಬರು ಮೃತಪಟ್ಟಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಆರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.