ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿದರು.
ಉಡುಪಿ: ಪುಸ್ತಕ ಓದುವ ಹವ್ಯಾಸವು ವ್ಯಕ್ತಿಯಲ್ಲಿ ಚಿಂತನಾಶಕ್ತಿಯನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಹೇಳಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ಅಜ್ಜರಕಾಡಿನ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನಗರ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಓದಿನ ಅಭ್ಯಾಸ ನಮ್ಮಲ್ಲಿದ್ದರೆ ಪ್ರತಿಯೊಂದು ವಿಷಯವನ್ನು ಆಳವಾಗಿ ಗ್ರಹಿಸಲು ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಸ್ತುತ ಪಠ್ಯಕ್ರಮ ಏಕಮುಖವಾಗಿದ್ದು, ಸಂಯೋಜಿತ ಜ್ಞಾನ ಶಿಕ್ಷಣ ವ್ಯವಸ್ಥೆಯಲ್ಲಿ ಪೂರ್ಣಪ್ರಮಾಣದಲ್ಲಿ ಅಳವಡಿಕೆಯಾಗಿಲ್ಲ. ಹಾಗಾಗಿ ಪರ್ಯಾಯ ವಿಷಯಗಳ ಅರಿವು ಪಡೆಯಲು ಗ್ರಂಥಾಲಯಗಳು ಸೂಕ್ತ ತಾಣಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಯುಗದಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು 2 ನಿಮಿಷದ ರಿಲ್ಸ್ ನೋಡುವ ಅಭ್ಯಾಸ ಹೆಚ್ಚಾಗಿ ಬೆಳೆಯುತ್ತಿದೆ. ಪುಸ್ತಕಗಳನ್ನು ಓದುವುದರಿಂದ ಜೀವನದ ಬಗ್ಗೆ ಆಳವಾದ ಜ್ಞಾನ ದೊರಕುತ್ತದೆ. ಜನರು ಸ್ಥಳಿಯ ಲೇಖಕರು ಬರೆದ ಪುಸ್ತಕಗಳನ್ನು ಓದಬೇಕು. ಈ ಮೂಲಕ ಲೇಖಕರ ಪರಿಚಯವಾಗಿ ಅವರ ಮತ್ತು ಓದುಗರ ಮಧ್ಯೆ ಸಂಪರ್ಕ ಏರ್ಪಡುತ್ತದೆ. ಪುಸ್ತಕ ಗಳಲ್ಲಿ ಲೇಖಕರ ದೃಷ್ಟಿ ಕೋನದ ಪರಿಚಯವಾಗುತ್ತದೆ. ಜೀವನವನ್ನು ವಿವಿಧ ಆಯಾಮಗಳಲ್ಲಿ ನೋಡಲು ಪುಸ್ತಕ ಸಹಾಯ ಮಾಡುತ್ತದೆ ಎಂದರು.
ಗ್ರಂಥಾಲಯಗಳು ಕೇವಲ ಪುಸ್ತಕ ಇಡುವ ಸ್ಥಳವಾಗದೆ, ಸಮಾಜದ ಚಟುವಟಿಕೆಗಳ ಕೇಂದ್ರವಾಗಿ ಹೊರಹೊಮ್ಮಬೇಕು. ಮಕ್ಕಳು ಹಾಗೂ ಸಾರ್ವಜನಿಕರು ಗ್ರಂಥಾಲಯದ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾಹಿತಿ ಡಾ. ಪಾರ್ವತಿ ಜಿ. ಐತಾಳ್ ಉಪನ್ಯಾಸ ನೀಡಿದರು. ಗ್ರಂಥ ಪಾಲಕರ ದಿನಾಚರಣೆಯ ನಿಮಿತ್ತ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ., ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥ ಪಾಲಕಿ ವನಿತಾ ಉಪಸ್ಥಿತರಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಸುರೇಖಾ ಸ್ವಾಗತಿಸಿ, ಗ್ರಂಥ ಪಾಲಕಿ ರಂಜಿತ ಬಹುಮಾನ ವಿಜೇತರ ವಿವರ ವಾಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸತೀಶ್ ಕೂಡವೂರು ನಿರೂಪಿಸಿ ವಂದಿಸಿದರು.