ಉಪ್ಪೂರು ಗ್ರಾಮದಲ್ಲಿ ಪ್ರಜಾಸೇವೆ ಆಂದೋಲನ ಸಭೆಯನ್ನು ಯಶ್​ಪಾಲ್​ ಸುವರ್ಣ ಉದ್ಘಾಟಿಸಿದರು. ಸ್ವರೂಪಾ ಟಿ.ಕೆ., ಅಬೀದ್​ ಗದ್ಯಾಳ, ಎಸ್​.ಎಸ್​. ಕಾದ್ರೊಳ್ಳಿ, ರಶ್ಮಿ ಎಸ್​.ಆರ್​., ಸುಧೀರಕುಮಾರ್​ ಕೆ., ಡಾ. ಸುನೀತಾ ಶೆಟ್ಟಿ ಇದ್ದರು. 
ಉಡುಪಿ

ಜನಸಾಮಾನ್ಯರ ಸಮಸ್ಯೆ, ಅಹವಾಲಿಗೆ ಸ್ಪಂದಿಸೋಣ

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಶಯ

* ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ

ಉಡುಪಿ: ಜನರ ಬಳಿಗೇ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಪರಿಹಾರ ನೀಡುವುದೇ ಪ್ರಜಾಸೇವಾ ಆಂದೋಲನ ಸಭೆಯ ಉದ್ದೇಶ. ಹೀಗಾಗಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಕುಂದು&ಕೊರತೆಯ ಅಹವಾಲುಗಳಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು. ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ಸರ್ಕಾರದ ಇಂತಹ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಬ್ಬರೂ ಕಾರ್ಯಪ್ರವೃತ್ತರಾಗೋಣ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಉಪ್ಪೂರು ಗ್ರಾಮದ ಕೊಳಲಗಿರಿಯಲ್ಲಿರುವ ಸೇಕ್ರೆಡ್​ ಹಾರ್ಟ್​ ಚರ್ಚ್​ನ ಸೌಹಾರ್ದ ಸಭಾಭವನದಲ್ಲಿ ಪ್ರಜಾಸೇವಾ ಇಲಾಖೆ ಹಾಗೂ ಬ್ರಹ್ಮಾವರ ತಾಲೂಕು ಆಡಳಿತದ ವತಿಯಿಂದ ಶನಿವಾರ (ಅ.17) ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದರು.

ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ ಮಾತನಾಡಿದರು. ಗ್ರಾಪಂನ ಶೇ.25ರ ಅನುದಾನದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸವಲತ್ತು ವಿತರಿಸಲಾಯಿತು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ 43 ಅಹವಾಲು ಸಲ್ಲಿಕೆಯಾಗಿದವು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಜಿಪಂ ಉಪ ಕಾರ್ಯದರ್ಶಿ ಎಸ್​.ಎಸ್​. ಕಾದ್ರೊಳ್ಳಿ, ಸಹಾಯಕ ಕಮಿಷನರ್​ ರಶ್ಮಿ ಎಸ್​.ಆರ್​., ಉಪ್ಪೂರು ಗ್ರಾಪಂ ಆಡಳಿತಾಧಿಕಾರಿ ಸುಧೀರಕುಮಾರ್​ ಕೆ., ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಉಪ್ಪೂರು ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು ಉಪಸ್ಥಿತರಿದ್ದರು.

ಪಿಡಿಒ ಸಿದ್ಧೇಶ ಸ್ವಾಗತಿಸಿದರು. ತಾಪಂ ಸಹಾಯಕ ನಿರ್ದೇಶಕ ಮಹೇಶ ಕಾರ್ಯಕ್ರಮ ನಿರೂಪಿಸಿದರು.

ಗ್ರಾಪಂನ ಶೇ.25ರ ಅನುದಾನದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸವಲತ್ತು ವಿತರಿಸಲಾಯಿತು.

ಜನಸೇವೆಯೇ ನಮ್ಮ ಧರ್ಮ

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ನಾಗರಿಕರ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಮುಗಿಸಿ ಅವರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಸೆ.5ರಿಂದ ರಾಜ್ಯಾದ್ಯಂತ ಪ್ರಜಾಸೇವಾ ಆಂದೋಲನ ಸಭೆಗಳನ್ನು ಪ್ರತಿ ಶನಿವಾರ ನಡೆಸುತ್ತಿದೆ. 1 ಮತ್ತು 3ನೇ ಶನಿವಾರ ಜಿಲ್ಲಾ ಪ್ರಜಾಸೇವಾ ಸಭೆಯನ್ನು ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ಹಾಗೂ 2 ಮತ್ತು 4ನೇ ಶನಿವಾರ ತಾಲೂಕು ಮಟ್ಟದ ಸಭೆಯನ್ನು ಹೋಬಳಿ ಮಟ್ಟದಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಆಯೋಜಿಸಲಾಗುತ್ತಿದೆ. ಸೇವೆಯೇ ನಮ್ಮ ಧರ್ಮ. ಸರ್ಕಾರಿ ಕೆಲಸವೇ ಜನಸಾಮಾನ್ಯರ ಸೇವೆ ಮಾಡುವುದಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದರು.