ಆಳ್ವಾಸ್ ರೋಸ್ಟ್ರಮ್ ವಿಶೇಷ ಉಪನ್ಯಾಸದಲ್ಲಿ ಡಾ.ಕೆ.ಎನ್.ಗಣೇಶಯ್ಯ, ವಿವೇಕ ಆಳ್ವ, ಡಾ.ದೀಪಾ ಕೊಠಾರಿ, ಡಾ.ರುಚಿಕಾ ರೋಶನ್ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಹೊರಗಿನಿಂದ ಬರುವ ನೀರಿನ ಮೇಲೆ ಅವಲಂಬಿತರಾಗದೆ ನಮ್ಮ ತಲೆಯ ಮೇಲೆ ಬೀಳುವ ನೀರನ್ನು ಸಂರಕ್ಷಿಸುವ ತಂತ್ರ ರೂಪಿಸಬೇಕು. ಪ್ರಕೃತಿಯ ಸೂಕ್ಷ್ಮಹಾಗೂ ಅದೃಶ್ಯ ಪ್ರಕ್ರಿಯೆಗಳು ಪರಸ್ಪರ ಬೆಸೆದುಕೊಂಡಿದ್ದು, ಒಂದರಲ್ಲಿ ಬದಲಾವಣೆ ಮಾಡಿದರೂ ಮತ್ತೊಂದರ ಮೇಲೆ ಪರಿಣಾಮ ಬೀರುತ್ತದೆ ಎಂದು ಕೃಷಿ ವಿಜ್ಞಾನಿ, ಕಾದಂಬರಿಕಾರ ಹಾಗೂ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ.ಕೆ.ಎನ್.ಗಣೇಶಯ್ಯ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವೇದಿಕೆಯಿಂದ ಮಂಗಳವಾರ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪ್ರಕೃತಿಯ ಅದೃಶ್ಯ ಕೊಂಡಿಗಳು: ಪರಿಸರ ವ್ಯವಸ್ಥೆಯ ನಿಯಂತ್ರಣ ಸೂತ್ರಗಳು’ ವಿಷಯದ ಕುರಿತು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ ಅಧ್ಯಕ್ಷತೆ ವಹಿಸಿ, ಸ್ವಚ್ಛತೆ ಮನಸ್ಸಿನಿಂದ ಆರಂಭವಾಗಬೇಕು ಎಂದರು.
ರೋಸ್ಟ್ರಮ್ ಸ್ಪೀರ್ಸ್ ಕ್ಲಬ್ ಅಧ್ಯಕ್ಷೆ ಡಾ.ದೀಪಾ ಕೊಠಾರಿ, ಕಾರ್ಯಕ್ರಮ ನಿರ್ದೇಶಕಿ ಡಾ.ರುಚಿಕಾ ರೋಶನ್, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ವಿ.ಶಂಕರ್ ಇದ್ದರು. ಯೋಗೇಶ್ವರ ಕಾರ್ಯಕ್ರಮ ನಿರೂಪಿಸಿದರು. ಖ್ಯಾತಿ ವಂದಿಸಿದರು.
ಪರಿಸರ ವ್ಯವಸ್ಥೆಗೆ ಹಾನಿಯಾದ ಬಳಿಕ ಪುನಃಸ್ಥಾಪಿಸುವುದಕ್ಕಿಂತ ಈಗಿರುವ ವ್ಯವಸ್ಥೆಯನ್ನು ಮುಂದಿನ ಪೀಳಿಗೆಗೆ ಹಾನಿಯಾಗದಂತೆ ಹಸ್ತಾಂತರಿಸುವುದು ಉತ್ತಮ ಮಾರ್ಗ. ಸಣ್ಣ ಮಾನವೀಯ ಹಸ್ತಕ್ಷೇಪಗಳೂ ಸರಣಿ ಪರಿಣಾಮ ಉಂಟುಮಾಡಬಹುದು. ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಪರಸ್ಪರ ವಿರುದ್ಧವಾಗಿ ನೋಡದೆ ಸಮತೋಲನ ಸಾಧಿಸಬೇಕು. ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ರಕ್ಷಿಸುವುದು ಭವಿಷ್ಯದ ನೀರಿನ ಭದ್ರತೆಯ ಪ್ರಶ್ನೆಯೂ ಆಗಿದೆ.
— ಡಾ.ಕೆ.ಎನ್.ಗಣೇಶಯ್ಯ, ಹಿರಿಯ ವಿಜ್ಞಾನಿ