ಹಾವಂಜೆಯಲ್ಲಿ 25 ದಿನ ನಡೆದ ಕಾವಿ ಕಲೆಯ ಕಾರ್ಯಾಗಾರ ಸಂಪನ್ನಗೊಂಡಿತು. ಆಶಾ ಪೂಜಾರಿ, ರಾಜೇಶ್ವರಿ, ಡಾ. ಜನಾರ್ದನ್​ ರಾವ್​ ಹಾವಂಜೆ, ಜನಾರ್ದನ್​ ಮೂಲ್ಯ, ಗಣೇಶ್​ ಕುಲಾಲ್​, ಶೇಷಪ್ಪ ಕುಲಾಲ್​, ಮಂಜುನಾಥ ರಾವ್​, ಬ್ರಿಜೇಶ್​ ಜೈಸ್ವಾಲ್​ ಹಾಗೂ ಕಲಾವಿದರಿದ್ದರು. 
ಉಡುಪಿ

ಕಲೆಗಳಿಂದಲೂ ಅಭಿವೃದ್ಧಿಗೊಳ್ಳಲಿ ಗ್ರಾಮಗಳು

ಪ್ರಶಾಂತ ಜಿ. ಭಾಗ್ವತ

* ಹಾವಂಜೆ ಗ್ರಾಪಂ ಅಧ್ಯಕ್ಷೆ ಆಶಾ ಪೂಜಾರಿ ಆಶಯ 

* ಕಾವಿ ಕಲೆಯ 25 ದಿನದ ಕಾರ್ಯಾಗಾರ ಸಂಪನ್ನ

ಉಡುಪಿ: ನಗರ ಭಾಗಗಳಿಗಷ್ಟೇ ಸೀಮಿತವಾಗಿದ್ದ ಕಲಾ ಶಿಬಿರ ಗ್ರಾಮೀಣ ಪ್ರದೇಶದಲ್ಲೂ ನಡೆದಿರುವುದು ಸಂತಸದ ವಿಚಾರ. ನಮ್ಮೂರಿನ ಹೆಮ್ಮೆಯಾಗಿರುವ ಕಾವಿ ಕಲಾವಿದ ಡಾ. ಜನಾರ್ದನ್​ ಅವರು ಹಾವಂಜೆಯಲ್ಲಿ ಕಾರ್ಯಾಗಾರ ಆಯೋಜಿಸಿರುವುದು ಮಾದರಿಯಾಗಿದೆ. ಸ್ಥಳೀಯ ಕರಕುಶಲಕರ್ಮಿಗಳು ಈ ಕಲಾಪ್ರಕಾರದಲ್ಲಿ ಇನ್ನಷ್ಟು ತೊಡಗಿಸಿಕೊಂಡು ಗ್ರಾಮದ ಅಭಿವೃದ್ಧಿಗೂ ಕಾರಣೀಕರ್ತರಾಗಲಿ ಎಂದು ಹಾವಂಜೆ ಗ್ರಾಪಂ ಅಧ್ಯಕ್ಷೆ ಆಶಾ ಪೂಜಾರಿ ಆಶಯ ವ್ಯಕ್ತಪಡಿಸಿದರು.
ಹಾವಂಜೆಯ ಭಾಸ ಗ್ಯಾಲರಿ ಮತ್ತು ಸ್ಟುಡಿಯೋದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಮಂಡಳಿ ಸಹಕಾರದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿ. ಪುತ್ತೂರು ನೇತೃತ್ವದಲ್ಲಿ 25 ದಿನಗಳ ಕಾಲ ಆಯೋಜಿಸಿದ್ದ ಅಳಿವಿನಂಚಿನ 'ಕಾವಿ' ಕಲೆಯ ವಿನ್ಯಾಸಗಳ ಅಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿನ್ಯಾಸ ವೃದ್ಧಿಗೆ ಅವಕಾಶ
ಕರಕುಶಲ ಅಭಿವೃದ್ಧಿ ಮಂಡಲಿಯ ಸಹ ನಿರ್ದೇಶಕಿ ರಾಜೇಶ್ವರಿ ಮಾತನಾಡಿ, ಗ್ರಾಮೀಣ ಕುಶಲಕರ್ಮಿಗಳಿಗೆ ವಿವಿಧ ವಿನ್ಯಾಸಗಳನ್ನು ವೃದ್ಧಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ದಿನಭತ್ಯೆಯೊಂದಿಗೆ ನಡೆಸಲ್ಪಡುತ್ತದೆ. ಮಾರುಕಟ್ಟೆಗೆ ಸಹಕಾರ ನೀಡುವ ಪ್ರದರ್ಶನಗಳೂ ಇಲಾಖೆಯಲ್ಲಿದೆ. ಅಳಿವಿನಂಚಿನ ಕಾವಿ ಕಲೆಯನ್ನು ಉಡುಪಿಯ ಹಾವಂಜೆಯಲ್ಲಿ ಕೇಂದ್ರವಾಗಿಸಿ ಬೆಳೆಸುತ್ತಿರುವುದು ಸಂತೋಷದ ಸಂಗತಿ ಎಂದರು.
ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಸಿಇಒ ಜನಾರ್ದನ್​ ಮೂಲ್ಯ, ನಿರ್ದೇಶಕರಾದ ಗಣೇಶ್​ ಕುಲಾಲ್​, ಶೇಷಪ್ಪ ಕುಲಾಲ್​, ಕಾವಿ ಆರ್ಟ್​ ಫೌಂಡೇಷನ್​ನ ಅಧ್ಯಕ್ಷ ಮಂಜುನಾಥ ರಾವ್​ ಉಪಸ್ಥಿತರಿದ್ದರು.

ಗಮನ ಸೆಳೆದ ಮಣ್ಣಿನ ಉತ್ಪನ್ನ

ಕಾರ್ಯಾಗಾರದಲ್ಲಿ ಕೈಯಿಂದಲೇ ತಯಾರಿಸಿದ ವಿವಿಧ ರೀತಿಯ ಸ್ಮರಣಿಕೆಗಳು, ಮಣ್ಣಿನ ವಿವಿಧ ವಿನ್ಯಾಸಗಳ ಮಡಕೆ, ಮಣ್ಣಿನಿಂದಲೇ ತಯಾರಿಸಿದ ಉತ್ಪನ್ನ, ಅಂಗಿ, ಕುರ್ತಾ, ದಿಂಬಿನ ಬಟ್ಟೆ, ಟೀ ಕೋಸ್ಟರ್​, ಸ್ಮರಣಿಕೆ ನೀಡುವ ಬಾಕ್ಸ್​, ಮರದ ವಿವಿಧ ವಿನ್ಯಾಸಗಳು, ದಿನ ಬಳಕೆಯ ವಸ್ತುಗಳ ಮೇಲೆಯೂ ಕಾವಿ ಕಲೆಯ ವಿನ್ಯಾಸ ರಚಿಸಿರುವುದು ಗಮನ ಸೆಳೆದವು. ಕಲಾವಿದರುಗಳಿಗೆ ಹಿರಿಯ ವಿನ್ಯಾಸಗಾರ ದೆಹಲಿಯ ಬ್ರಿಜೇಶ್​ ಜೈಸ್ವಾಲ್​ ಸಹಕರಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು.
"

ಕಾರ್ಯಾಗಾರದ ಮೂಲಕ ಕಾವಿ ಕಲೆಯ ವಿನ್ಯಾಸಗಳನ್ನು ದಿನಬಳಕೆಯ ವಸ್ತುಗಳಲ್ಲೂ ಪ್ರಯೋಗಾತ್ಮಕವಾಗಿ ಚಿತ್ರಿಸಲಾಗಿದೆ. ಈ ಪ್ರಯತ್ನ ಕಲೆಯ ಬೆಳವಣಿಗೆಗೆ ಪೂರಕವಾಗಿದ್ದು, ಸ್ಥಳೀಯರು ಇನ್ನಷ್ಟು ತೊಡಗಿಸಿಕೊಳ್ಳಬೇಕು. ಉಡುಪಿ ಭಾಗಕ್ಕೆ ಕಾವಿ ಕಲೆಗೆ ಜಿಐ ಟ್ಯಾಗ್​ ನೀಡವಂತೆ ಈಗಾಗಲೇ ಅರ್ಜಿ ಹಾಕಲಾಗಿದ್ದು, ಗೋವಾ ಹಾಗೂ ನಮ್ಮ ಕರಾವಳಿಯ ಭಾಗಕ್ಕೆ ಜಂಟಿಯಾಗಿ ಲಭಿಸುವ ನಿರೀಕ್ಷೆ ಇದೆ.