ಉಡುಪಿ ಶ್ರೀಕೃಷ್ಣ ಮಠದ ಮುಖ್ಯ ದ್ವಾರದ ರಥಬೀದಿಯಲ್ಲಿ ಸ್ವರ್ಣ ಲೇಪಿತ 'ಪಾರ್ಥ ಸಾರಥಿ' ರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನಿಡುವ ಮೂಲಕ ಅದಮಾರು ಮಠದ ವಿಶ್ವಪ್ರಿಯ ತೀರ್ಥರ ಶ್ರೀಪಾದರು ಪ್ರಥಮ ರಥೋತ್ಸವಕ್ಕೆ ಚಾಲನೆ ನೀಡಿದರು. ಪರ್ಯಾಯ ಸುಗುಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ, ಮಂತ್ರಾಲಯದ ಸುಬುಧೇಂದ್ರ ಶ್ರೀ, ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ಶ್ರೀ ಉಪಸ್ಥಿತರಿದ್ದರು.
* ಪರ್ಯಾಯ ಸುಗುಣೇಂದ್ರ ಶ್ರೀ ಆಶೀರ್ವಚನ
* ಪಾರ್ಥ ಸಾರಥಿ ಸ್ವರ್ಣ ರಥದ ಪ್ರಥಮ ರಥೋತ್ಸವ
ಉಡುಪಿ: ವಿಶ್ವವನ್ನು ಮನುಷ್ಯ ನಡೆಸಲು ಸಾಧ್ಯವಿಲ್ಲ. ಅದು ಭಗವಂತನಿಂದ ಮಾತ್ರ ಸಾಧ್ಯ. ಆತನ ಕೃಪೆಯಿಂದ ಮಾತ್ರ ಸಕಲವೂ ಸಾಧ್ಯ. ಹೀಗಾಗಿ ನಮ್ಮ ಎಲ್ಲ ಸಾರಥ್ಯವನ್ನೂ ಭಗವಂತನಿಗೆ ನೀಡಿದರೆ ಆತನು ತ್ರಿಗುಣಗಳಾದ ಸಂಪತ್ತು, ವಿಜಯ, ಸಕಲ ಸಮೃದ್ಧಿ ನೀಡುತ್ತಾನೆ. ಅದುವೇ ಈ ಪಾರ್ಥ ಸಾರಥಿ ರಥದ ಸಂದೇಶವಾಗಿದೆ. ನನಗೆ ದೇವರು ಬೇಡ, ಅಕ್ಷೋಹಿಣಿ ಸೈನ್ಯ ಬೇಕೆಂದ ಕೌರವನಿಗೆ ಸೋಲಾಯಿತು. ನಿರಾಯುಧನಾಗಿ ಬರುವ ನೀನೊಬ್ಬನೇ ಸಾಕು ಎಂದು ಅರ್ಜುನನಿಗೆ ಗೆಲುವಾಯಿತು. ಕೃಷ್ಣಾ ಎಂದು ಮನಸಾರೆ ಕರೆದರೆ ಆತನ ಅನುಗ್ರಹ ಖಂಡಿತ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯದ ಮುಕ್ತಾಯದ ಹಂತದಲ್ಲಿ ಹಾಗೂ ಸನ್ಯಾಸ ಜೀವನದ ಸುವರ್ಣ ಮಹೋತ್ಸವದ ಸ್ಮರಣಾರ್ಥ ಉಡುಪಿ ಶ್ರೀಕೃಷ್ಣನಿಗೆ ಶುಕ್ರವಾರ (ಡಿ.26) ಸಮರ್ಪಿಸಿದ್ದ ಸ್ವರ್ಣ ಲೇಪಿತ 'ಪಾರ್ಥ ಸಾರಥಿ' ರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನಿಟ್ಟು ರಥಬೀದಿಯಲ್ಲಿ ಶನಿವಾರ ಸಂಜೆ (ಡಿ.27) ಆಯೋಜಿಸಿದ್ದ ಪಾರ್ಥ ಸಾರಥಿ ರಥದ ಪ್ರಥಮ ರಥೋತ್ಸವದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮತ್ತೆ ಕೃಷ್ಣನ ಪರ್ಯಟನೆ
ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣನು ಇಂದ್ರನು ನೀಡಿದ ರಥವನ್ನೇರಿ ವಿಶ್ವವನ್ನೇ ರಕ್ಷಿಸಿದ ಎನ್ನುವುದು ಮಹಾಭಾರತದಲ್ಲಿ ಉಲ್ಲೇಖವಿದೆ. ನಮ್ಮ ಉಡುಪಿ ಶ್ರೀಕೃಷ್ಣನಿಗೆ ಅದೇ ಇಂದ್ರನು ನೀಡಿರುವ ಸ್ವರ್ಣಮಯ 'ಪಾರ್ಥ ಸಾರಥಿ' ರಥವನ್ನು ಮಂತ್ರಾಲಯದ ಸುಬುಧೇಂದ್ರ ಶ್ರೀಗಳು ನಿನ್ನೆ (ಶುಕ್ರವಾರ) ಕೃಷ್ಣನಿಗೆ ಸಮರ್ಪಿಸಿದ್ದು, ಇಂದು (ಶನಿವಾರ) ಅದಮಾರು ಮಠದ ವಿಶ್ವಪ್ರಿಯ ತೀರ್ಥರು ಶ್ರೀಕೃಷ್ಣನನ್ನು ರಥದಲ್ಲಿ ಕೂರಿಸಿ, ಪ್ರಥಮ ರಥೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ರಥದಲ್ಲಿ ಕುಳಿತ ಶ್ರೀಕೃಷ್ಣನು ಮತ್ತೆ ವಿಶ್ವ ರಕ್ಷಣೆಗಾಗಿ ಪರ್ಯಟನೆ ಮಾಡಲಿದ್ದಾನೆ. ಆತ ಪಾರ್ಥಸಾರಥಿಯಷ್ಟೇ ಅಲ್ಲ, ವಿಶ್ವವನ್ನೇ ಮುನ್ನೆಡೆಸುವ ವಿಶ್ವ ಸಾರಥಿ. ಗೀತೆಯ ಸಂದೇಶ ಅನುಸರಣೆಯಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.
ಸಮಸ್ಯೆ ನೀಗಿಸುವ ತಂದೆ
ಸ್ವರ್ಣ ರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನಿಟ್ಟು ಪ್ರಥಮ ರಥೋತ್ಸವಕ್ಕೆ ಚಾಲನೆ ನೀಡಿದ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಮಧ್ವಾಚಾರ್ಯರು ತನಗಾಗಿ ಅಲ್ಲ, ನಮ್ಮೆಲ್ಲ ಭಕ್ತರಿಗಾಗಿ ಶ್ರೀಕೃಷ್ಣನನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಜೀವನದಲ್ಲಿ ಎಲ್ಲ ಬಗೆಯ ಗಟ್ಟಿ ಸಮಸ್ಯೆಗಳನ್ನು ಹೊತ್ತು ತಂದ ಭಕ್ತರನ್ನು ನಿನ್ನ ಕೈಯಲ್ಲಿರುವ ಕಡಗೋಲಿನಿಂದ ಕಡೆದು, ಹುಳಿ-ಕಹಿಯನ್ನು ತೆಗೆದು ರುಚಿಕರವಾದ ಬೆಣ್ಣೆಯ ರೂಪದಲ್ಲಿ ಅಶೀರ್ವದಿಸು ಎಂದು ಕೃಷ್ಣನನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆ. ಗೀತೆಯ ಆರಾಧಕರಾದ ಪ್ರಧಾನಿ ಮೋದಿಯನ್ನೇ ಇಲ್ಲಿಗೆ ಕರೆಸಿ, ದೇಶಕ್ಕೆ ಗೀತೆಯ ಮಹಿಮೆ ಸಾರಿದಾತ ಈ ಕೃಷ್ಣ. ಇದೀಗ ಪಾರ್ಥ ಸಾರಥಿ ರಥದಲ್ಲಿ ಭಗವಂತ ಕುಳಿತು ದುಷ್ಟ ದಂಡನೆ, ಶಿಷ್ಟರ ರಕ್ಷಣೆ ಮಾಡಲಿ. ಗೀತೆಯನ್ನು ಹೊಂದಿರುವ ಭಾರತವು ಭಾಗ್ಯ ವಿಧಾತ, ಸಿಂಧೂರವನ್ನು ಕೆಣಕಿದವರಿಗೆ ಇನ್ನು ಉಳಿಗಾಲವಿಲ್ಲ ಎಂದರು.
ನಿತ್ಯ ಗೀತೆ ಪಠಿಸಿ
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ಶ್ರೀ ಆಶೀರ್ವಚನ ನೀಡಿ, ಗುರುಗಳ ಮಾರ್ಗದರ್ಶನದಲ್ಲಿ ನಿತ್ಯ ಕೃಷ್ಣ ಸೇವೆ ಮಾಡುವ ಅವಕಾಶ ಲಭಿಸರುವುದು ಸಂತಸ ತಂದಿದೆ. ಪೂಜ್ಯರ ಎಲ್ಲ ಯೋಜನೆಗಳೂ ಭಕ್ತರನ್ನು ಭವ ಬಂಧನದಿಂದ ಪಾರು ಮಾಡುವುದೇ ಆಗಿದೆ. ಎಲ್ಲ ಸದ್ಭಕ್ತರೂ ಭಗವದ್ಗೀತೆಯನ್ನು ನಿತ್ಯ ಪಠಿಸಿ, ಅದರ ಸಂದೇಶದಂತೆ ಬದುಕಬೇಕು. ವಿಶ್ವಕ್ಕೆ ಸನ್ಮಂಗಲವಾಗಲಿ ಎಂದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿಜಯ ಸಂಕೇಶ್ವರ, ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪನಾ ನಿರ್ದೇಶಕ ರಾಘವೇಂದ್ರ ಎಸ್. ಭಟ್, ಚೆನ್ನೈ ವುಡ್ಲ್ಯಾಂಡ್ಸ್ ಹೋಟೆಲ್ಸ್ನ ಮುಖ್ಯಸ್ಥ ಮುರಳಿ ರಾವ್, ಉದ್ಯಮಿ ರಾಮ್ಪ್ರಸಾದ್ ಬೆಂಗಳೂರು, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ ಉಪಸ್ಥಿತರಿದ್ದರು.
ಸ್ವರ್ಣ ರಥ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳನ್ನು ಶ್ರೀಗಳು ಸನ್ಮಾನಿಸಿದರು. ಪುತ್ತಿಗೆ ಮಠದ ಶಿಷ್ಯರು ವೇದಘೋಷ ಪಠಿಸಿದರು. ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಹಾಗೂ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ದಾಮೋದರ ಶೇರಿಗಾರ ತಂಡ ಸ್ಯಾಕ್ಸೋಫೋನ್ ವಾದನ ಹಾಗೂ ವಾದಿರಾಜ ಭಜನಾ ಮಂಡಳಿಯ ವತಿಯಿಂದ ಭಜನೆ ನಡೆಯಿತು.
ಸಾಧನೆ, ವಿಜಯದ ಸಂಕೇತ ಸಂಕೇಶ್ವರರು
ಶ್ರೀಕೃಷ್ಣನ ಗೀತೆಯ ಸಂದೇಶದಂತೆ ವಿಜಯ ಸಂಕೇಶ್ವರರು ವಿಜಯದ ಸಂಕೇತವಾಗಿದ್ದಾರೆ. ಸಾಧನೆ ಮಾಡುವವರಿಗೆ ಪ್ರೇರಕರೂ ಆಗಿದ್ದಾರೆ. ನಮ್ಮ ಪರ್ಯಾಯದ ಕಾರ್ಯಕ್ರಮದಲ್ಲಿ ಅವರನ್ನು ಆಹ್ವಾನಿಸಿದ್ದರೂ ಅವರ ಕಾರ್ಯ ಬಾಹುಳ್ಯದಿಂದ ಬರಲು ಆಗಿರಲಿಲ್ಲ. ಆದರೆ, ನಮ್ಮ ಸ್ವರ್ಣಮಯ ಪಾರ್ಥ ಸಾರಥಿಯ ಪ್ರಥಮ ರಥೋತ್ಸವಕ್ಕೆ ಹಾಗೂ ತಾನು ರಥವನ್ನೇರುವ ಸಂದರ್ಭದಲ್ಲಿ ಲಾಜೆಸ್ಟಿಕ್ ಕ್ಷೇತ್ರದ ದಿಗ್ಗಜರಾದ ವಿಜಯ ಸಂಕೇಶ್ವರರು ಇರಬೇಕೆಂದು ಶ್ರೀಕೃಷ್ಣನೇ ಇಂದು ಕರೆಸಿದ್ದಾನೆ. ಅವರು ವಿಆರ್ಎಲ್ ಎಂಬ ದೊಡ್ಡ ಕಂಪನಿಯ ಸಾರಥಿಯೂ ಆಗಿದ್ದಾರೆ. ಅವರು ಭಗವದ್ಗೀತೆಯ ಸಂದೇಶವನ್ನು ಪ್ರಚಾರ ಮಾಡಲು ಈ ಶುಭ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸಿದ್ದು, ಶ್ರೀಕೃಷ್ಣನು ಅವರಿಗೆ ಸಕಲ ಅನುಗ್ರಹ ಕರುಣಿಸಲಿ ಎಂದು ಸುಗುಣೇಂದ್ರ ಶ್ರೀಗಳು ಹಾರೈಸಿದರು.
ಪಾರ್ಥ ಸಾರಥಿ ರಥದಲ್ಲಿ ಶ್ರೀಕೃಷ್ಣನ್ನು ಕೂರಿಸುವಾಗ ಆದ ಸಂತೋಷ ಹೇಳಲು ಸಾಧ್ಯವಿಲ್ಲ. ಏಕೆಂದರೆ, ಕೃಷ್ಣನನ್ನು ನೋಡುವುದೇ ಭಾಗ್ಯ, ಆತನನ್ನು ಸ್ಮರಿಸುವುದೇ ಇನ್ನೊಂದು ಭಾಗ್ಯ. ದ್ವಾಪರಯುಗದಲ್ಲಿ ಧರ್ಮ ರಕ್ಷಣೆಗಾಗಿ ಕೃಷ್ಣನು ಪಾರ್ಥನ ಸಾರಥಿಯಾಗಿ ದುಷ್ಟರ ಸಂಹಾರ ಮಾಡಿಸಿದ್ದನು. ಮಹಾಭಾರತದ ಕೃಷ್ಣನಿಗೆ ಇಂದ್ರನ ರಥ ಬಂದಂತೆ ಪೊಡವಿಗೊಡೆಯನಾದ ಕೃಷ್ಣನಿಗೆ ಚಿನ್ನದ, ಚೆಂದದ ಸ್ವರ್ಣ ರಥವೂ ಸಹ ಉಪೇಂದ್ರ ತೀರ್ಥರೆಂಬ ಪ್ರವರ್ತಿತ ಸಂಸ್ಥಾನದ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಕೊಡಲ್ಪಟ್ಟಿದೆ. ನಾಸ್ತಿಕರು, ಭಗವಂತನ ಹಾಗೂ ಸನಾತನ ಧರ್ಮವನ್ನು ವಿರೋಧಿಸುವವರೆಲ್ಲರನ್ನೂ ಶ್ರೀಕೃಷ್ಣನು ಈ ಪಾರ್ಥ ಸಾರಥಿ ರಥದಲ್ಲಿ ಸಂಚರಿಸಿ ಸಂಹರಿಸಲಿ.
ದೇಶಿಯವಲ್ಲದ ಸಂಸ್ಕೃತಿಯ ಪ್ರಭಾವದಿಂದ ಎಲ್ಲರೂ ದಾರಿ ತಪ್ಪುವ ಹಂತದಲ್ಲಿದ್ದಾರೆ. ಅನೇಕ ಅಪಾರ್ಥ ಮಾಡುವ ಸಾರಥಿಗಳು ಲಭಿಸುತ್ತಾರೆ. ಒಳ್ಳೆಯ ದಾರಿಯಲ್ಲಿ ಸಾಗಲು ಬೇಕಾದ ಪಾರ್ಥ ಸಾರಥಿಯಾಗಿ ಕೃಷ್ಣನ ಅನುಗ್ರಹಕ್ಕೆ ಪುತ್ತಿಗೆ ಶ್ರೀಗಳು ಪಾತ್ರರಾಗಿದ್ದಾರೆ. ಪಾರ್ಥ ಸಾರಥಿ ರಥ ನಿರ್ಮಾಣದ ಮೂಲಕ ಭಾರತೀಯ ಸಂಸ್ಕೃತಿ, ಧರ್ಮದ ಮಹತ್ವವನ್ನು ಮತ್ತೊಮ್ಮೆ ಸಾರಲು ಅವರು ಕಾಯೋರ್ನ್ಮುಖರಾಗಿದ್ದಾರೆ.