ಶಿಕ್ಷಕರ ದಿನಾಚರಣೆ ಪ್ರಯುಕ್ತ ಸಾಧಕ ಶಿಕ್ಷಕರಾದ ಡಾ.ಅಭಯ್ ಎಸ್.ನಿರ್ಗುಡೆ, ಡಾ.ಭಾಗ್ಯ ಬಿ.ಶರ್ಮಾ ಹಾಗೂ ಡಾ.ಅಶ್ವಿನಿ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸ್ವಾವಲಂಬಿ ಭಾರತ ನಿರ್ಮಾಣ ನಿಟ್ಟಿನಲ್ಲಿ ವಿವಿಗಳು ರಾಷ್ಟ್ರೀಯ ಪರಿವರ್ತನೆಯ ಯಂತ್ರಗಳಾಗಿ ಕಾರ್ಯನಿರ್ವಹಿಸಬೇಕು. ಆರ್ಥಿಕ ದೇಶಭಕ್ತಿ ಮತ್ತು ತಾಂತ್ರಿಕ ರಾಷ್ಟ್ರೀಯತೆ ಕೇಂದ್ರೀಕರಿಸಿ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಸರ್ಕಾರದ ನಡುವೆ ಸಹಯೋಗ ಬೆಳೆಸಬೇಕು ಎಂದು ತಮಿಳುನಾಡಿನ ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಉಪಕುಲಪತಿ ಡಾ.ವಿ.ಎಸ್.ಕಾಂಚನಾ ಭಾಸ್ಕರನ್ ಹೇಳಿದರು.
ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಯೆನೆಪೋಯ ಫ್ಯಾಕಲ್ಟಿ ಡೆವಲಪ್‌ಮೆಂಟ್ ಸೆಂಟರ್ ವತಿಯಿಂದ ಯೆಂಡ್ಯೂರೆನ್ಸ್ ಸಭಾಂಗಣದಲ್ಲಿ ಶನಿವಾರ ಶಿಕ್ಷಕರ ದಿನಾಚರಣೆಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೆನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎಸ್.ಗಂಗಾಧರ ಸೋಮಯಾಜಿ ಅಧ್ಯಕ್ಷತೆ ವಹಿಸಿ, ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ವೇಗದ ಬೆಳವಣಿಗೆಯಿಂದಾಗಿ ಶಿಕ್ಷಣ ವ್ಯವಸ್ಥೆಯಲ್ಲೂ ಮಹತ್ತರ ಬದಲಾವಣೆಗಳಾಗುತ್ತಿವೆ. ಶಿಕ್ಷಕರು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಬೋಧನಾ ಕ್ರಮವನ್ನು ಇನ್ನಷ್ಟು ಆಕರ್ಷಕ, ಸುಲಭ ಹಾಗೂ ಪರಿಣಾಮಕಾರಿಯಾಗಿಸಬೇಕು. ಶಿಕ್ಷಕರು ಕೇವಲ ಪಾಠ ಬೋಧಿಸುವವರಾಗಿ ಉಳಿಯದೆ, ವಿದ್ಯಾರ್ಥಿಗಳಿಗೆ ಮೆಂಟರ್‌ಗಳು, ಕೌನ್ಸೆಲರ್‌ಗಳು ಹಾಗೂ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಸಂಸ್ಥೆಯ ಸಾಧಕ ಶಿಕ್ಷಕರಾದ ಡಾ.ಅಭಯ್ ಎಸ್.ನಿರ್ಗುಡೆ, ಡಾ.ಭಾಗ್ಯ ಬಿ.ಶರ್ಮಾ ಹಾಗೂ ಡಾ.ಅಶ್ವಿನಿ ಎಸ್.ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಯೆನೆಪೋಯ ವೆಬಿನಾರ್ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಎನ್‌ವೈಡಿಸಿ ಉಪನಿರ್ದೇಶಕಿ ಡಾ.ರಶ್ಮಿ ಜೈನ್ ಸ್ವಾಗತಿಸಿದರು. ಕಾರ್ಯಕ್ರಮ ಸಹಸಂಯೋಜಕಿ ಡಾ.ದಿವ್ಯಾ ಅತಿಥಿಯನ್ನು ಪರಿಚಯಿಸಿದರು. ಕುಲಸಚಿವೆ ಡಾ.ಅಶ್ವಿನ್ ದತ್ ಆರ್.ಪ್ರಶಸ್ತಿ ಪತ್ರ ವಾಚಿಸಿದರು. ಎನ್‌ವೈಡಿಸಿ ಸಂಚಾಲಕ ಡಾ.ಇಮ್ರಾನ್ ಪಾಷಾ ಎಂ.ವಂದಿಸಿದರು.