ಉಡುಪಿಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ. ಜನಾರ್ದನ್​ ರಾವ್​ ಹಾವಂಜೆ, ಡಾ. ಬಿ.ಜಗದೀಶ್​ ಶೆಟ್ಟಿ, ಸಂತೋಷ್​ ಪೈ, ರಮೇಶ್​ ಅಂಬಾಡಿ, ವಿಶ್ವನಾಥ ಶೆಣೈ, ಡಾ. ವೈ. ರವೀಂದ್ರನಾಥ ರಾವ್​ ಇತರರಿದ್ದರು. 
ಉಡುಪಿ

ವಿದ್ಯಾರ್ಥಿಗಳಲ್ಲಿರಲಿ ನಿತ್ಯ ಸ್ಪರ್ಧಾ ಮನೋಭಾವ

 ಡಾ. ಜನಾರ್ದನ್​ ರಾವ್​ ಹಾವಂಜೆ ಆಶಯ
ಚಿತ್ರಕಲಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಉಡುಪಿ: ಯಾವುದೇ ಸ್ಪರ್ಧೆಯಲ್ಲಿ ಸೋಲು-ಗೆಲುವು ಇರುತ್ತದೆ. ಹೀಗಾಗಿ ಬಹುಮಾನ ಪಡೆಯಲೇಬೇಕೆಂಬ ನಿಲುವು ಬಿಟ್ಟು ಸ್ಪರ್ಧಾ ಮನೋಭಾವದೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಮಕ್ಕಳಲ್ಲಿ ಕಲೆಯ ಬಗೆಗಿನ ಆಸಕ್ತಿ ಹೆಚ್ಚಿಸಲು ಪಾಲಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಸಂತಸ ವಿಚಾರ. ಇನ್ನಷ್ಟು ಹೊಸ ಹೊಸ ರೀತಿಯ ಚಿತ್ರಕಲೆಗಳ ಕಲಿಕೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳಬೇಕು ಎಂದು ಖ್ಯಾತ ಕಾವಿ ಕಲಾವಿದ ಡಾ. ಜನಾರ್ದನ್​ ರಾವ್​ ಹಾವಂಜೆ ಕರೆ ನೀಡಿದರು.
ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ ಆಶ್ರಯದಲ್ಲಿ ಬಾರ್ಕೂರು ಮೂಡುಕೇರಿ ಗಂಗಮ್ಮ ರಾಮಚಂದ್ರ ಶಾಸ್ತ್ರಿ ಸ್ಮರಣಾರ್ಥ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪ.ಪೂ., ಪದವಿ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂತೋಷ್​ ಪೈ, ಚಿತ್ರಕಲಾ ಶಿಕ್ಷಕ ರಮೇಶ್​ ಅಂಬಾಡಿ, ಡಾ. ಜನಾರ್ದನ ಹಾವಂಜೆ ತೀರ್ಪುಗಾರರಾಗಿ ಸಹಕರಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಿರಿಯ ಸಮಾಜ ಸೇವಕ ವಿಶ್ವನಾಥ ಶೆಣೈ, ಬ್ರಹ್ಮಾವರ ಎಸ್​ಎಂಎಸ್​ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವೈ. ರವೀಂದ್ರನಾಥ ರಾವ್​, ಕೇಂದ್ರದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್​ ಶೆಟ್ಟಿ ಅವರು ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು. ಆರ್​.ಜಿ. ಪೈ ಹಾಗೂ ಆರ್​ಆರ್​ಸಿ ಸಿಬ್ಬಂದಿ ಕಾರ್ಯಕ್ರಮ ಆಯೋಜಿಸಿದರು. ಸೀತಾರಾಮ ಶಾಸ್ತ್ರಿ ಬಾರ್ಕೂರು ಸಹಕರಿಸಿದರು.

ಬಹುಮಾನ ಗಳಿಸಿದ ವಿದ್ಯಾರ್ಥಿಗಳು

1ರಿಂದ 4ನೇ ತರಗತಿ ವಿಭಾಗದಲ್ಲಿ ಹೆಬ್ರಿಯ ಎಸ್​.ಆರ್​. ಪಬ್ಲಿಕ್​ ಸ್ಕೂಲ್​ನ 4ನೇ ತರಗತಿಯ ದೇಶ್ನಾ ಕುಲಾಲ್​, 5ರಿಂದ 7ನೇ ತರಗತಿ ವಿಭಾಗದಲ್ಲಿ ಬ್ರಹ್ಮಾವರದ ಜಿಎಂವಿಪಿಎಸ್​ನ 6ನೇ ತರಗತಿಯ ನಿಹಾರ್​ ಜೆ.ಎಸ್​., 8ರಿಂದ 10ನೇ ತರಗತಿ ವಿಭಾಗದಲ್ಲಿ ಉಡುಪಿ ಕುಂಜಿಬೆಟ್ಟು ಟಿ.ಎ. ಪೈ ಇಂಗ್ಲಿಷ್​ ಮೀಡಿಯಂ ಸ್ಕೂಲ್​ನ 8ನೇ ತರಗತಿಯ ಪ್ರೇರಿತಾ ಯು., ಪದವಿ ಪೂರ್ವ ವಿಭಾಗದಲ್ಲಿ ಉಡುಪಿಯ ವಿದ್ಯೋದಯ ಪ.ಪೂ. ಕಾಲೇಜಿನ ದ್ವಿತೀಯ ಪಿಯುಸಿಯ ಪ್ರತಿಷ್ಟಾ ಶೇಟ್​, ಪದವಿ ವಿಭಾಗದಲ್ಲಿ ಉಡುಪಿಯ ಚಿತ್ರಕಲಾ ಮಂದಿರದ ಕಲಾ ಶಾಲೆಯ ಬಿವಿಎ 4ನೇ ವರ್ಷದ ರಾಘವೇಂದ್ರ ಮರವಂತೆ, ಪ್ರಥಮ ಸ್ಥಾನಗಳಿಸಿದರು.