ಜನಜಾಗೃತಿಗಾಗಿ ಬೈಕ್ ಮೂಲಕ ಸಂಚಾರ ಮಾಡಿ ವಿಶ್ವ ದಾಖಲೆ ಮಾಡಿದ್ದ ದೃಶಾ ಕೊಡಗು ಅವರನ್ನು ಉಡುಪಿಯಲ್ಲಿ ಅಭಿನಂದಿಸಲಾಯಿತು. ಲಾಲಾಜಿ ಮೆಂಡನ್, ಡಾ.ವಿಜಯೇಂದ್ರ ವಸಂತ್, ರಂಜನ್ ಕಲ್ಕೂರ, ಪೂರ್ಣಿಮಾ, ದಿನಕರ್ ಹೇರೂರು ಇತರರಿದ್ದರು.
* ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಆಶಯ
* ವಿಶ್ವ ದಾಖಲೆ ಮಾಡಿದ ದೃಶಾ ಕೊಡಗುಗೆ ಅಭಿನಂದನೆ
ಉಡುಪಿ: ಇಂದಿನ ಯಾಂತ್ರಿಕ ಹಾಗೂ ವೈಜ್ಞಾನಿಕ ದಿನಗಳಲ್ಲಿ ಬಹುತೇಕ ಮಕ್ಕಳು ದಾರಿ ತಪ್ಪುತ್ತಿದ್ದು ಮೌಲ್ಯಯುತ ಜೀವನ, ಹಿರಿಯ ಸ್ಫೂರ್ತಿದಾಯಕ ನುಡಿಗಳು ಇಂದಿನ ಯುವ ಸಮುದಾಯಕ್ಕೆ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಕುಟುಂಬಗಳೂ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಮಾದಕ ವ್ಯಸನಗಳ ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಯುವಜನತೆಯನ್ನು ಸಾಹಸ ಪ್ರವೃತ್ತಿ, ವಿವಿಧ ಕಲೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೋತ್ಸಾಹ ನೀಡಬೇಕಿದೆ ಎಂದು ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಅಭಿಪ್ರಾಯಪಟ್ಟರು.
ಉಡುಪಿ ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಬಿನಂದನಾ ಕಾರ್ಯಕ್ರಮದಲ್ಲಿ ಮೂರು ರಾಜ್ಯಗಳಲ್ಲಿ ಬೈಕ್ ಸಂಚಾರದ ಮೂಲಕ ಜನಜಾಗೃತಿ ಮೂಡಿಸಿ ವಿಶ್ವ ದಾಖಲೆ ಮಾಡಿದ್ದ ದೃಶಾ ಕೊಡಗು ಅವರನ್ನು ಸನ್ಮಾನಿಸಿ ಮಾತನಾಡಿದರು.
ಡಾ.ವಿಜಯೇಂದ್ರ ವಸಂತ್ ಅಭಿನಂದನಾ ಭಾಷಣ ಮಾಡಿದರು. ರಂಜನ್ ಕಲ್ಕೂರ ಶುಭ ಹಾರೈಸಿದರು.
ಎಲ್ಲರ ಪ್ರೋತ್ಸಾಹ ಅಗತ್ಯ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅಂತಾರಾಷ್ಟ್ರೀಯ ಉತ್ತಮ ಬಾಲನಟ ಪ್ರಶಸ್ತಿ ಪುರಸತ ಚಲನಚಿತ್ರ ನಟ ಹಾಗೂ ಬೈಕ್ ಸಂಚಾರದಲ್ಲಿ ಸಾಧನೆ ಮಾಡಿದ ದೃಶಾ ಕೊಡಗು, ಭೇಟಿ ನೀಡಿದ ಮೂರೂ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನನ್ನೊಟ್ಟಿಗೆ ಗೆಳೆಯ ಉಜ್ವಲ್ ಕಾಮತ್ ಇದ್ದರು. ನಮ್ಮಂತಹ ಯುವಸಮುದಾಯ ಸಾಧನೆ ಮಾಡಲು ಪಾಲಕರು, ಸಾರ್ವಜನಿಕರು ಪ್ರೋತ್ಸಾಹ ನೀಡಬೇಕು. ಉತ್ತಮ ಆರೋಗ್ಯ, ಸಾಧನೆಯತ್ತ ಯುವಕರ ಚಿತ್ತವಿರಬೇಕು ಎಂದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು, ಹಿರಿಯ ಜೇಸಿ ಡೆನಿಸ್ ಡಿಸೋಜಾ, ಜೇಸಿ ವಲಯ ಪೂರ್ವಾಧ್ಯಕ್ಷ ಅಭಿಲಾಷ್, ವಲಯಧಿಕಾರಿ ಸ್ವರಾಜ್, ವನಸುಮ ವೇದಿಕೆಯ ಅಧ್ಯಕ್ಷ ವಿನಯ್ ಆಚಾರ್ಯ, ಹಿರಿಯ ರಂಗ ನಿರ್ದೇಶಕ ಬಾಸುಮ ಕೊಡಗು, ಅಸಾಮಾನ್ಯ ಸಾಧಕಿ ಆದಿಸ್ವರೂಪಾ, ಜೆಸಿಐ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಚಿತ್ರದುರ್ಗ ಜಿಲ್ಲೆಯ ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಹಾಗೂ ಕಟ್ಟೆಮಾರ್ ಸಿನಿಮಾ ತಂಡದ ನಿರ್ದೇಶಕರು ಮತ್ತು ಕಲಾವಿದರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಜೆಸಿಐ ಉಡುಪಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಬೈಕ್ನಲ್ಲಿ 12 ದಿನ, 3 ಸಾವಿರ ಕಿ.ಮೀ. ಸಂಚಾರ
ಕೌಟುಂಬಿಕ, ಸಾಮಾಜಿಕ ಹಿಂಸೆ, ದೌರ್ಜನ್ಯದ ವಿರುದ್ಧ ಜನಜಾಗೃತಿ ಮತ್ತು ಎಚ್ಚರಿಕೆ ಮೂಡಿಸಲು ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಜೆಸಿಐ ಕಟಪಾಡಿ ಮತ್ತು ಜೆಸಿಐ ಉಡುಪಿ ಸಿಟಿ ಸಹಕಾರದಲ್ಲಿ ದೃಶ್ಯಾ ಕೊಡಗು ಮತ್ತು ಉಜ್ವಲ್ ಕಾಮತ್ ಅವರು 12 ದಿನಗಳ ಕಾಲ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಬೈಕ್ನಲ್ಲಿ ಒಟ್ಟು 3 ಸಾವಿರ ಕಿ.ಮೀ. ಸಂಚಾರ ಮಾಡಿದ್ದರು. ಅದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆಯಾಗಿತ್ತು.