ಮಾದಕ ದ್ರವ್ಯ ಸೇವನೆ ಹಾಗೂ ಮಾದಕ ಸಾಗಾಟದ ಬಗ್ಗೆ ಅರಿವು ಮೂಡಿಸುವ ನಾಮಫಲಕವನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅನಾವರಣಗೊಳಿಸಿದರು. ಪ್ರಮುಖರಾದ ಲೋಕೇಶ್ ಸಿ., ಸಂಗೊಳ್ಳಿ ಸೋಮಣ್ಣ, ಸುಮಾ ಆಚಾರ್, ರೋಷನ್ ಖಾರ್ವಿ ನಾವುಂದ, ಕಾರ್ತಿಕ್ ಸಂಗೊಳ್ಳಿ, ಶಾಂತಾ, ಸುಧಾಕರ್ ಇದ್ದರು.
ಬೈಂದೂರು: ಯುವಕರು ಸಮುದಾಯದ ಅಮೂಲ್ಯ ಸಂಪನ್ಮೂಲ. ಅವರನ್ನು ಸಾಮಾಜಿಕವಾಗಿ ಉಪಯುಕ್ತರಾಗುವಂತೆ ಬಳಸಿಕೊಳ್ಳಬೇಕಿದೆ. ಮಾದಕ ವ್ಯಸನಕ್ಕೆ ಬಲಿಯಾಗುವ ಯುವಜನಾಂಗಕ್ಕೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ಸೇವಾ ಸಂಸ್ಥೆ ಆಯೋಜಿಸಿದ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಅಳವಡಿಸುವ ಮಾದಕ ದ್ರವ್ಯ ಸೇವನೆ ಹಾಗೂ ಮಾದಕ ಸಾಗಾಟದ ಬಗ್ಗೆ ಅರಿವು ಮೂಡಿಸುವ ನಾಮಫಲಕವನ್ನು ಮಂಗಳವಾರ ಕಚೇರಿಯಲ್ಲಿ ಅನಾವರಣಗೊಳಿಸಿ ಮಾತನಾಡಿದರು.
ಅತಿಹೆಚ್ಚು ಯುವಜನರನ್ನು ಹೊಂದಿದ ದೇಶ ನಮ್ಮದಾಗಿದ್ದು, ಒತ್ತಡದಲ್ಲಿರುವ ಯುವಜನಾಂಗ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಮಾದಕದ್ರವ್ಯಗಳ ಉಪಯೋಗ ತಡೆಯಲು ಜನರಲ್ಲಿ ಅರಿವು ಮೂಡಿಸಬೇಕು. ಶತ್ರುಗಳು ನಮ್ಮ ದೇಶವನ್ನು ಒಡೆಯುವುದಕ್ಕಾಗಿ ಯುವಜನಾಂಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದೇಶವನ್ನು ಪ್ರೀತಿಸುವ ಪ್ರತಿಯೊಬ್ಬರೂ ದೇಶವನ್ನು ಮಾದಕ ವ್ಯಸನ ಮುಕ್ತವನ್ನಾಗಿಸಲು ಪಣ ತೊಡಬೇಕಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಲೋಕೇಶ್ ಸಿ., ಸಂಗೊಳ್ಳಿ ರಾಯಣ್ಣ ಸೇವಾ ಸಂಸ್ಥೆ ರಾಜ್ಯಾಧ್ಯಕ್ಷ ಸಂಗೊಳ್ಳಿ ಸೋಮಣ್ಣ, ಸುಮಾ ಆಚಾರ್, ರೋಷನ್ ಖಾರ್ವಿ ನಾವುಂದ, ಕಾರ್ತಿಕ್ ಸಂಗೊಳ್ಳಿ, ಶಾಂತಾ, ಸುಧಾಕರ್ ಇದ್ದರು.