ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟದ ಕಚೇರಿಯನ್ನು ಯು.ಟಿ. ಖಾದರ್​ ಉದ್ಘಾಟಿಸಿದರು. ಎಂ.ಎ. ಗಫೂರ್​, ಸುಹೇಲ್​ ಅಹ್ಮದ್​ ಮರೂರು, ಝಮೀರ್​ ಅಹ್ಮದ್​ ರಶಾದಿ, ಮುಹಮ್ಮದ್​ ಮೌಲಾ, ಯಾಸೀನ್​ ಮಲ್ಪೆ, ಇನಾಯತುಲ್ಲಾ ಶಾಬಂದ್ರಿ, ರಫೀಯುದ್ದೀನ್​ ಕುದ್ರೋಳಿ, ಕಿಶನ್​ ಹೆಗ್ಡೆ ಕೊಳ್ಕೆಬೈಲು ಇತರರಿದ್ದರು. 
ಉಡುಪಿ

ಸಾಮರಸ್ಯದ ಸಮಾಜ ನಿರ್ಮಾಣ ಧ್ಯೇಯವಾಗಲಿ

* ಆರೋಗ್ಯ ಸಚಿವ ಯು.ಟಿ. ಖಾದರ್​ ಆಶಯ

* ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟದ ಕಚೇರಿ ಉದ್ಘಾಟನೆ

ಉಡುಪಿ: ಸಾಮರಸ್ಯದ ಬದುಕು ಮತ್ತು ಒಗ್ಗಟ್ಟು ಸಮಾಜದ ದೊಡ್ಡ ಶಕ್ತಿಯಾಗಿದ್ದು ಅದುವೇ ಸಮಾಜದ ಗೌರವದ ಸಂಕೇತವಾಗಿದೆ. ಸಾಮರಸ್ಯದ ಸಮಾಜ ಕಟ್ಟುವುದು ಇಂದಿನ ಅತಿ ಅಗತ್ಯತೆಯಾಗಿದ್ದು, ಆ ಕಾರ್ಯವನ್ನು ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟ ಮುಖ್ಯ ಧ್ಯೇಯವಾಗಿ ಮಾಡಬೇಕಾಗಿದೆ ಎಂದು ರಾಜ್ಯ ವಕ್ಫ್​, ಹಜ್​, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್​ ಕರೆ ನೀಡಿದರು.

ಉಡುಪಿಯ ವಿ.ಕೆ. ಪ್ಯಾರಡೈಸ್​ ಕಟ್ಟಡದಲ್ಲಿ ರವಿವಾರ (ಅ.4) ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ವರ್ಷ ಪೂರೈಸಿ ರಜತ ಸಂಭ್ರಮದಲ್ಲಿರುವ ಉಡುಪಿ ಜಿಲ್ಲಾ ಮುಸ್ಲಿಮ್​ ಒಕ್ಕೂಟದ ನೂತನ ಸ್ವಂತ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಸಚಿವ ಯು.ಟಿ. ಖಾದರ್​ ಮಾತನಾಡಿದರು.

ಸೌಹಾರ್ದತೆ ಅಗತ್ಯ

ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಮಾತನಾಡಿ, ಪ್ರೀತಿಯ ಮೂಲಕ ಸಮಾಜ ಕಟ್ಟುವ ಕಾರ್ಯ ನಾವೆಲ್ಲ ಮಾಡಬೇಕಾಗಿದೆ. ಒಕ್ಕೂಟವು ಸಮುದಾಯದ ಏಕತೆಯೊಂದಿಗೆ ಇನ್ನಿತರ ಸಮುದಾಯಗಳೊಂದಿಗೆ ಸೌಹಾರ್ದ ಮೂಡಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕರ್ನಾಟಕ ರಾಜ್ಯ ಮುಸ್ಲಿಮ್​ ಒಕ್ಕೂಟದ ಸಂಚಾಲಕ ಸುಹೇಲ್​ ಅಹ್ಮದ್​ ಮರೂರು ಮಾತನಾಡಿ, ಸೌಹಾರ್ದದ ಸಮಾಜ ಕಟ್ಟುವಲ್ಲಿ ಒಕ್ಕೂಟದ ಪಾತ್ರ ಪ್ರಮುಖವಾಗಿದೆ. ಭಾರತವು ಜಾತ್ಯತಿತ, ಸೌಹಾರ್ದ ದೇಶವಾಗಿ ಉಳಿಯಬೇಕಾದರೆ ಇಂತಹ ನೂರಾರು ಒಕ್ಕೂಟ ಹುಟ್ಟಿಕೊಳ್ಳಬೇಕಿದೆ ಎಂದರು.

ಭಟ್ಕಳ ಮಜ್ಲಿಸ್​ ಇ ಇಸ್ಲಾಹ್​ ಓ ತಂಝೀಮ್​ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಯುನಿವೆಫ್​ ಕರ್ನಾಟಕ ಅಧ್ಯಕ್ಷ ರಫೀಯುದ್ದೀನ್​ ಕುದ್ರೋಳಿ, ಸಹಬಾಳ್ವೆ ಕುಂದಾಪುರ ತಾಲೂಕು ಸಂಚಾಲಕ ರಾಮಕೃಷ್ಣ ಹೆರ್ಳೆ, ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಮಾತನಾಡಿದರು. ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್​ ಮಲ್ಪೆ ಸಮಾರೋಪ ಭಾಷಣ ಮಾಡಿದರು.

ವಿಕೆ ಗ್ರೂಪ್​ ಹಾಗೂ ಕಟ್ಟಡದ ಮಾಲೀಕ ಕರುಣಾಕರ್​ ಎಂ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಅಬ್ದುಲ್ಲ ಪರ್ಕಳ, ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲ ನಾವುಂದ, ಅಶ್ಫಕ್​ ಕಾರ್ಕಳ, ಇಬ್ರಾಹಿಂ ಕೋಟ, ಹಿರಿಯ ಉಪಾಧ್ಯಕ್ಷ ಮುಹಮ್ಮದ್​ ರಫೀಕ್​ ಬಿಎಸ್​ಎಫ್​, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕಿಶನ್​ ಹೆಗ್ಡೆ ಕೊಳ್ಕೆಬೈಲು ಉಪಸ್ಥಿತರಿದ್ದರು.

ಉಡುಪಿ ಜಾಮೀಯ ಮಸೀದಿಯ ಖತೀಬ್​ ಮೌಲಾನಾ ಅಬ್ದುಲ್​ ರಶೀದ್​ ಉಮರಿ ಕುರಾನ್​ ಪಠಿಸಿದರು. ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಮೌಲಾನಾ ಝಮೀರ್​ ಅಹ್ಮದ್​ ರಶಾದಿ ಸ್ವಾಗತಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಮುಹಮ್ಮದ್​ ಮೌಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್​ ಹುಸೇನ್​ ಕಟಪಾಡಿ ವಂದಿಸಿದರು. ಎಸ್​.ಮುನೀರ್​ ಕಂಡ್ಲೂರು ಹಾಗೂ ಜಿ.ಎಂ. ಶರೀಫ್​ ಹೂಡೆ ಕಾರ್ಯಕ್ರಮ ನಿರೂಪಿಸಿದರು.

ನಾವು ಕಮ್ಯುನಿಟಿಗೆ ಸಹಾಯ ಮಾಡಬೇಕೆ ಹೊರತು ಕಮ್ಯುನಲ್​ ಆಗಬಾರದು. ಧಾರ್ಮಿಕ ನಂಬಿಕೆ ನಮ್ಮ ಮಣ್ಣಿನ ಶಕ್ತಿಯೇ ಹೊರತು ದೌರ್ಬಲ್ಯವಲ್ಲ. ಎಲ್ಲ ಧರ್ಮಗಳ ಸಂದೇಶ ಅರಿತು ಗೌರವಿಸಿ, ಅವರ ಕಷ್ಟಗಳಿಗೆ ಸ್ಪಂದಿಸುವುದು ನಮ್ಮ ಮೊದಲ ಆದ್ಯತೆ ಆಗಬೇಕು.
ಯು.ಟಿ. ಖಾದರ್​. ಆರೋಗ್ಯ ಸಚಿವ.