ಉಡುಪಿಯಲ್ಲಿ ಆಯೋಜಿಸಿದ್ದ 'ಕರಾವಳಿ ಭಜನಾ ಸಮಾವೇಶ'ದ ಸಮಾರೋಪದಲ್ಲಿ ಪ್ರತಿಭಾ ಸಾಮಗ ಮಾತನಾಡಿದರು. ಕಾ.ತ. ಚಿಕ್ಕಣ್ಣ, ಡಾ. ಬಿ.ಜಗದೀಶ್ ಶೆಟ್ಟಿ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಇದ್ದರು.
ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಸಾಮಗ ಆಶಯ
'ಕರಾವಳಿ ಭಜನಾ ಸಮಾವೇಶ' ಸಮಾರೋಪ
ಉಡುಪಿ: ದೇವರ ಆರಾಧನೆಯ ಸುಲಭ ಮಾರ್ಗವಾಗಿರುವ ಭಜನೆ ಬಹಳ ಮುಖ್ಯವಾದ ಕಾರ್ಯ. ಅದು ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಧರ್ಮಗಳೂ ಸಹ ಪಾಲಿಸಲು ಯೋಗ್ಯವಾದುದಾಗಿದೆ. ಭಜನೆಯಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಹಾಗೂ ಏಕಾಗ್ರತೆ ಲಭಿಸುತ್ತದೆ. ಪ್ರತಿದಿನವೂ ಮನೆ-ಮನಗಳಲ್ಲಿ ಭಜನೆ ಮೊಳಗಬೇಕು ಎಂದು ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್. ಸಾಮಗ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಎಂಜಿಎಂ ಕಾಲೇಜಿನ ಟಿ.ಮೋಹನದಾಸ್ ಪೈ ಅಮೃತಸೌಧ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂತಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಕನಕದಾಸ ಅಧ್ಯಯನ ಸಂಶೋಧನಾ ಪೀಠ ಉಡುಪಿ ಮತ್ತು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ ಆಶ್ರಯದಲ್ಲಿ ನಡೆದಿದ್ದ ಎರಡು ದಿನಗಳ ಕರಾವಳಿ ಭಜನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ. ಚಿಕ್ಕಣ್ಣ ಮಾತನಾಡಿದರು.
ಉಡುಪಿ ಕನಕದಾಸ ಅಧ್ಯಯನ ಸಂಶೋಧನಾ ಪೀಠದ ಆಡಳಿತಾಧಿಕಾರಿ ಡಾ. ಬಿ.ಜಗದೀಶ್ ಶೆಟ್ಟಿ, ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸದಸ್ಯ ಸಂಚಾಲಕಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ರವಿರಾಜ್ ಎಚ್.ಪಿ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಯಾಂತ್ರೀಕೃತ ಬದುಕು, ನಿತ್ಯದ ಕೆಲಸದ ಒತ್ತಡದ ನಡುವೆ ದೇವರ ಸ್ಮರಣೆ ಮಾಡಲೂ ಇಂದಿನವರಿಗೆ ಸಮಯ ಇಲ್ಲದಾಗಿದೆ. ಈ ಹಿಂದೆ ದೇವರ ಭಜಿಸದ ಮನೆಗಳೇ ಇರಲಿಲ್ಲ. ಅದೊಂದು ಸಂಪ್ರದಾಯವಾಗಿತ್ತು. ಭಜನೆ ಹಾಡುವ ಸಂಸ್ಕೃತಿ ಮತ್ತೆ ಮುಂದುವರಿಯಲಿ. ಅದರಿಂದ ಮಕ್ಕಳ ಮನದಲ್ಲಿ ಧನಾತ್ಮಕ ಪರಿಣಾಮ ಉಂಟಾಗುತ್ತದೆ. ಭಜನೆಗೂ ಕೆಲ ಸಮಯ ಮೀಸಲಿಟ್ಟು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.