ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವರೂಪಾ ಟಿ.ಕೆ ಅವರು ರಾಷ್ಟ್ರೀಯ ಪಲ್ಸ್​ ಪೊಲೀಯೋ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿದರು. ಡಾ.ಬಸವರಾಜ ಹುಬ್ಬಳ್ಳಿ, ಡಾ. ಎಚ್​.ಅಶೋಕ್​, ಮಹಾಂತೇಶ್​ ಹಂಗರಗಿ, ಡಾ. ನಾಗರತ್ನಾ, ಡಾ.ಲತಾ ನಾಯಕ್​, ಡಾ. ಜ್ಯೋತ್ಸ್ನಾ ಬಿ.ಕೆ. ಇತರರಿದ್ದರು. 
ಉಡುಪಿ

ಪೋಲಿಯೋ ಲಸಿಕೆಯಿಂದ ಮಕ್ಕಳು ವಂಚಿತರಾಗದಿರಲಿ

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ

* ಡಿ.21ರಂದು ಜಿಲ್ಲಾದ್ಯಂತ ಪೋಲಿಯೋ ಹನಿ

ಉಡುಪಿ: ಜಿಲ್ಲಾದ್ಯಂತ ಪಲ್ಸ್​ ಪೋಲಿಯೋ ಕಾರ್ಯಕ್ರಮ ಡಿ.21ರಂದು ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಒಟ್ಟು 657 ಲಸಿಕಾ ಕೇಂದ್ರಗಳಲ್ಲಿ ನಡೆಯಲಿದ್ದು, ಎಲ್ಲ ಪಾಲಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ (ಡಿ.16) ಆಯೋಜಿಸಿದ್ದ ರಾಷ್ಟ್ರೀಯ ಪಲ್ಸ್​ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆಯ ಸಮನ್ವಯ ಸಮಿತಿ ಸಭೆಯಲ್ಲಿ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಅಗತ್ಯ ಸಿದ್ಧತೆ

ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 75,395 ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳ ಜತೆಯಲ್ಲಿ ಟ್ರಾನ್ಸಿಟ್​ 16 ಬೂತ್​, 5 ಮೊಬೈಲ್​ ಟೀಮ್​, 2,180 ಲಸಿಕೆದಾರರು ಹಾಗೂ 155 ಮೇಲ್ವಿಚಾರಕರು, ನಗರಸಭಾ ವ್ಯಾಪ್ತಿಯಲ್ಲಿ 272 ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಲಸಿಕೆದಾರರಿಗೆ ಲಸಿಕೆ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ. ಗುರುತಿಸಲಾದ ಶಾಲೆಗಳನ್ನು ತೆರೆದು, ಸುರಕ್ಷಿತ ದಾಸ್ತಾನಿನ ಬಗ್ಗೆ ಗಮನ ಹರಿಸಿ, ನಿರಂತರ ವಿದ್ಯುತ್​ ಪೂರೈಕೆ ಮಾಡಬೇಕು ಎಂದು ಸಂಬಂಧಿತ ಹಾಗೂ ನಿಯೋಜಿತ ಅಧಿಕಾರಿಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ಜನ್​ ಡಾ. ಎಚ್​.ಅಶೋಕ್​, ನಗರಸಭಾ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್​ ಭಟ್​, ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್​, ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿ

ವಿವಿಧ ಕಾರಣಗಳಿಂದ ಲಸಿಕೆ ಪಡೆಯಲಾಗದ ಮಕ್ಕಳಿಗಾಗಿ ಗ್ರಾಮೀಣ ಭಾಗದಲ್ಲಿ ಡಿ.22, 23ರಂದು ಹಾಗೂ ನಗರ ಭಾಗಗಳಲ್ಲಿ ಡಿ.22ರಿಂದ 24ರ ವರೆಗೆ ಲಸಿಕೆ ನೀಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನರ್ಸಿಂಗ್​ ವಿದ್ಯಾರ್ಥಿಗಳು ಮನೆ-ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಇದಕ್ಕಾಗಿ ಒಟ್ಟು 1,314 ತಂಡಗಳು 2,94,250 ಮನೆಗಳಿಗೆ ಭೇಟಿ ನೀಡಲಿದ್ದಾರೆ. ಪಾಲಕರು ಅಗತ್ಯ ಸಹಕಾರ ನೀಡಬೇಕು. ವಲಸೆ ಹಾಗೂ ಇನ್ನಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಜಾಗೃತಿ ಮೂಡಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ನೀಡಬೇಕು. ಎಲ್ಲರೂ ಪಲ್ಸ್​ ಪೊಲೀಯೋ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಬೇಕು ಎಂದು ಡಿಸಿ ಸ್ವರೂಪಾ ವಿನಂತಿಸಿದರು.