ಕಾಪು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವಿನಯಕುಮಾರ್ ಸೊರಕೆ, ಕಿಶೋರ್ ಆಳ್ವ, ಸುರೇಂದ್ರ ಅಡಿಗ, ಡಾ.ವೈ.ಎನ್.ಶೆಟ್ಟಿ, ಮಮತಾ ಶೆಟ್ಟಿ, ಪುಂಡಲೀಕ ಮರಾಠೆ, ರತ್ನಾಕರ ಶೆಟ್ಟಿ ರವೀಂದ್ರನಾಥ್ ರಾವ್ ಮತ್ತಿತರರಿದ್ದರು. 
ಉಡುಪಿ

ಕನ್ನಡಿಗರಲ್ಲಿರಲಿ ಭಾಷಾ ಅಭಿಮಾನ

ಕಾಪು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕರ್ನಾಟಕದ ಹೊರಗಿನವರಿಗೆ ಕನ್ನಡ ಕಲಿಸುವ ಅಗತ್ಯವಿದೆ. ವಿದೇಶಿಯರಿಗೆ ಕನ್ನಡ ಕಲಿಸಿ ನಮ್ಮಲ್ಲಿನ ನಾಡು ನುಡಿಯ ಕುರಿತು ಪರಿಚಯ ಮಾಡಿಕೊಡಬೇಕಾಗಿದೆ. ನಾವು ಬೇರೆಯವರಿಗೆ ಕನ್ನಡ ಕಲಿಸುವ ಬದಲು ಅವರ ಭಾಷೆಯನ್ನು ನಾವೇ ಕಲಿತು ಅವರೊಂದಿಗೆ ಅದೇ ಭಾಷೆಯನ್ನು ಮಾತನಾಡುವುದು ಸರಿಯಲ್ಲ. ಕನ್ನಡದ ಬಗ್ಗೆ ಅಭಿಮಾನ ಹೊಂದಬೇಕು ಎಂದು ಜಾನಪದ ಸಂಶೋಧಕ ಡಾ.ವೈ.ಎನ್.ಶೆಟ್ಟಿ ಹೇಳಿದರು.

ಕಾಪುವಿನಲ್ಲಿ ಶನಿವಾರ ನಡೆದ ಕಾಪು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯವನ್ನು ಮತ್ತೆ ಶಾಲಾ ಕಾಲೇಜುಗಳ ಕನ್ನಡ ಪಠ್ಯಗಳಲ್ಲಿ ಅಳವಡಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಕನ್ನಡ ಶಿಕ್ಷಕರನ್ನು ನಿರ್ಲಕ್ಷಿಸುವುದು ಸರಿಯಲ್ಲ. ತಾಲೂಕಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ಭಾಷಾ ಶಿಕ್ಷಕರನ್ನು ಗುರುತಿಸುವ ಕೆಲಸಗಳಾಬೇಕು ಎಂದರು.

ಆಂಗ್ಲ ಮಾಧ್ಯಮ ಶಾಲೆಗಳು ಕನ್ನಡ ಭಾಷೆಯ ಸೊಗಸಿಗೆ ಸವಾಲಾಗಿ ನಿಂತಿವೆ. ಕಾಪು ತಾಲೂಕಿನ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿ ನಾವೆಲ್ಲರೂ ಜತೆಯಾಗಿ ಪ್ರಯತ್ನಿಸಬೇಕಿದೆ. ತುಳು ಭಾಷೆ ನಮ್ಮ ನಾಡಿನ ಎರಡನೇ ಆಡಳಿತ ಭಾಷೆಯಾಗಿದ್ದು, ಈ ಬಗ್ಗೆ ನಾವೆಲ್ಲರೂ ಅಭಿಮಾನ ಪಡಬೇಕಾಗಿದೆ ಎಂದು ಹೇಳಿದರು.

ಜಲಮೂಲ ಸಂಸ್ಕೃತಿಯ ಗ್ರಾಮೀಣ ಅಂತರಂಗ

ನೆಲಮೂಲ ಸಂಸ್ಕೃತಿಯಿಂದ ಬಂದಿರುವ ಮಾನವ ಬದುಕು ಜಲಮೂಲ ಸಂಸ್ಕೃತಿಯೊಂದಿಗೆ ಕಾಡಿನ ಬದಿಯಲ್ಲಿ, ನದಿಯ ದಡದಲ್ಲಿ ನಾಗರಿಕ ಸಂಸ್ಕೃತಿಯನ್ನು ರೂಪಿಸಿತು. ಜಾನಪದ ಬದುಕು ಜಲಮೂಲ ಅನಕ್ಷರಸ್ಥ ಗ್ರಾಮೀಣರ ಅಂತರಂಗ. ಅದು ಬೆಳೆದುದು ಲೋಕಕ್ಕೆ ಅನ್ನ ಬೆಳೆದು ಕೊಡುವ ರೈತರ ಅಂಗಣದಲ್ಲಿ. ಈ ಜಾನಪದ ಬದುಕಿಗೆ ಹುಟ್ಟಿದ ಪರಿಸರವೇ ಶಾಲೆ, ಅವರು ಪಟ್ಟ ಅನುಭವವೇ ಗುರು. ದೇವರ ಆರಾಧನೆಗಿರಲಿ, ದುಡಿಮೆಯ ಬೇಸರ ಪರಿಹಾರಕ್ಕೆ ಇರಲಿ, ನಮ್ಮ ಜನ ಸೃಷ್ಟಿಸಿದ ಸಾಹಿತ್ಯ ಮತ್ತು ಕಲೆಗಳ ಮೌಲ್ಯ ಅನುಪಮವಾದವು. ಅವುಗಳನ್ನು ಗಮನಿಸಿದಾಗ ನಮ್ಮ ಜನ ಅಸಾಧಾರಣ ಪ್ರತಿಭೆಯ ದರ್ಶನವಾಗುತ್ತದೆ. ಅವರ ಒಂದೊಂದು ನುಡಿಗೂ ಒಂದೊಂದು ಕಲೆಗೂ ಅರ್ಥಪೂರ್ಣ ಹಿನ್ನೆಲೆಯಿದೆ. ಸಮಷ್ಟಿ ಕ್ಷೇಮದ ಚಿಂತನೆ ಇದೆ ಎಂದು ಡಾ.ವೈ.ಎನ್.ಶೆಟ್ಟಿ ತಿಳಿಸಿದರು.

ಸಮ್ಮೇಳನ ಸಮಾರೋಪ, ಸಾಧಕರಿಗೆ ಸನ್ಮಾನ

ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪದಲ್ಲಿ ಸಾಧಕರಾದ ಸೂರಿ ಶೆಟ್ಟಿ ಕಾಪು, ಮಾಧವ ಕಾಮತ್ ಬಂಟಕಲ್ಲು, ಗೋಪಾಲ ರಾವ್ ಪಾಲಮೆ, ಸುಧಾಕರ ಸಾಲಿಯಾನ್, ಜಯಂತಿ ಮೆಂಡನ್, ಮೋಹನ್‌ದಾಸ್ ಜಿ.ಕಿಣಿ ಕಾಪು, ದೇವಗಳ ವಿಷ್ಣುಮೂರ್ತಿ ಮಟ್ಟು, ಶಶಿಧರ ವಾಗ್ಳೆ ಸಡಂಬೈಲು ಬೆಳ್ಳೆ, ರಾಕೇಶ್ ಕುಂಜೂರು, ಅಕ್ಬರ್ ಸಾಹೇಬ್ ಕಾಪು, ಗುರುವ, ಹನುಮಂತ ಎರ್ಮಾಳು, ವಿಠಲ ಆಚಾರ್ಯ ಪಂಜಿಮಾರು ಅವರನ್ನು ಗೌರವಿಸಲಾಯಿತು. ಕಾಪು ತಾಲೂಕು ಕ.ಸಾ.ಪ. ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾರ್ಚಾಯ ಎಲ್ಲೂರು ರವೀಂದ್ರನಾಥ ರಾವ್ ಸಮಾರೋಪ ಭಾಷಣ ಮಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮ್ಮೇಳನ ಸರ್ವಾಧ್ಯಕ್ಷ ಡಾ.ವೈ.ಎನ್.ಶೆಟ್ಟಿ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಿಶೋರ್ ಆಳ್ವ, ನಡಿಕೆರೆ ರತ್ನಾಕರ ಶೆಟ್ಟಿ, ಮಮತಾ ಶೆಟ್ಟಿ, ಅಬ್ದುಲ್ ಹಮೀದ್, ಗೋಪಾಲಕೃಷ್ಣ ಗಾಂವ್ಕರ್ ಉಪಸ್ಥಿತರಿದ್ದರು.