ಉಡುಪಿ: ಸ್ವಾತಂತ್ರ್ಯ ಪೂರ್ವದಲ್ಲಿ ಸತ್ಯ ಹಾಗೂ ಅಹಿಂಸಾ ಹೋರಾಟದ ಮೂಲಕ ಮಹಾತ್ಮ ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಅವರ ಜಯಂತಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಾದ್ಯಂತ ಸ್ವಚ್ಛತಾ ಅಭಿಯಾನ ಆರಂಭಿಸಿದ್ದು, ವಿಶ್ವದ ಅನೇಕ ದೇಶಗಳು ಅನುಸರಿಸುತ್ತಿವೆ. ಗಾಂಧೀಜಿಯ ಜೀವನ, ಸಂದೇಶ ಎಲ್ಲರಿಗೂ ಆದರ್ಶವಾಗಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಕರೆ ನೀಡಿದರು.
ಉಡುಪಿಯ ಅಜ್ಜರಕಾಡು ಭುಜಂಗ ಶೆಟ್ಟಿ ಪಾರ್ಕ್ನಲ್ಲಿರುವ ಗಾಂಧಿ ಕಟ್ಟೆಯಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಉಡುಪಿ ನಗರಸಭೆ ವತಿಯಿಂದ ಶುಕ್ರವಾರ (ಅ.2) ಆಯೋಜಿಸಿದ್ದ ಜಿಲ್ಲಾಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಮಾತನಾಡಿ, ಗಾಂಧೀಜಿಯವರು ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ದೇಶಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಮಾಡಿದ್ದು, ನಾವೆಲ್ಲರೂ ಅವರ ತ್ಯಾಗ ಸ್ಮರಿಸಲೇಬೇಕು. ಅವರ ಆಶಯದಂತೆ ಸ್ವಚ್ಛತೆಗೆ ಆದ್ಯತೆ ಕೊಟ್ಟು ಗೌರವ ಸಲ್ಲಿಸೋಣ ಎಂದರು.
ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಅವರ 122ನೇ ಜನ್ಮದಿನಾಚರಣೆಯ ಶುಭ ಕೋರಲಾಯಿತು.
ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ನಗರಸಭಾ ಆಯುಕ್ತ ಮಹಾಂತೇಶ್ ಹಂಗರಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಇನ್ನಿತರರು ಇದ್ದರು.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಗಾಂಧೀಜಿಯವರು ಉಡುಪಿಯ ಅಜ್ಜರಕಾಡಿಗೆ ಭೇಟಿ ನೀಡಿ ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದರು. ಅವರ ಸವಿನೆನಪಿಗಾಗಿ ಇಲ್ಲಿ ಪುತ್ಥಳಿ ನಿರ್ಮಿಸಲಾಗಿದೆ. ಜಿಲ್ಲಾ ಆಟದ ಮೈದಾನಕ್ಕೂ ಸಹ ಅವರ ಹೆಸರನ್ನೇ ಇಡಲಾಗಿದೆ.> ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.