ಕಿದುವಿನಲ್ಲಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಕಿಟ್ ವಿತರಿಸಲಾಯಿತು. ಡಾ.ನಿರಾಲ್ ವಿ., ಡಾ.ಅನಿತಾ ಕುಮಾರಿ, ಡಾ.ದಿವಾಕರ್ ವೈ ಮತ್ತಿತರರು ಉಪಸ್ಥಿತರಿದ್ದರು. 
ಉಡುಪಿ

ವೈಜ್ಞಾನಿಕ ಕೃಷಿಯತ್ತ ರೈತರು ಮುಖಮಾಡಲಿ

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಗ್ರಾಮೀಣ ರೈತರು ವೈಜ್ಞಾನಿಕ ಕೃಷಿಯತ್ತ ಹೆಚ್ಚು ಒಲವು ತೋರಬೇಕು. ಮಣ್ಣಿನ ಫಲವತ್ತತೆ ಕುಸಿತ ಇಂದಿನ ಕೃಷಿಗೆ ದೊಡ್ಡ ಸವಾಲಾಗಿದ್ದು ರೈತರು ವೈಜ್ಞಾನಿಕ ಶಿಫಾರಸುಗಳ ಆಧಾರದ ಮೇಲೆ ಗೊಬ್ಬರ ಬಳಕೆ ಮಾಡಿದರೆ ಕೃಷಿ ಪ್ರಗತಿ ಸಾಧ್ಯ. ಸಂಸ್ಥೆಯು ರೈತ ಕೇಂದ್ರಿತ ತಂತ್ರಜ್ಞಾನಗಳನ್ನು ಗ್ರಾಮೀಣಮಟ್ಟಕ್ಕೆ ತಲುಪಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಕೃಷಿ ವಿಜ್ಞಾನಿ ಡಾ.ನಿರಾಲ್ ವಿ. ಹೇಳಿದರು.
ಕಿದು ಸಿಪಿಸಿಆರ್‌ಐನಲ್ಲಿ ಎಸ್‌ಸಿಎಸ್‌ಪಿ ಯೋಜನೆ ಅನ್ವಯ ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಸಮತೋಲನ ಗೊಬ್ಬರ ಬಳಕೆಯಲ್ಲಿ ರೈತ ಕೇಂದ್ರಿತ ಕ್ರಮಗಳು ಎಂಬ ವಿಷಯದಲ್ಲಿ ರೈತರಿಗೆ ಸೋಮವಾರ ವಿಶೇಷ ತರಬೇತಿ ಹಾಗೂ ಇನ್‌ಪುಟ್ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ವಿಜ್ಞಾನಿ ಡಾ.ಅನಿತಾ ಕುಮಾರಿ ಪಿ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ರವೀಂದ್ರ, ಪ್ರಮುಖರಾದ ಸತೀಶ್, ಸೋಮೇಶ್ ಉಪಸ್ಥಿತರಿದ್ದರು. ಗೋಪಾಲಕೃಷ್ಣ ಸ್ವಾಗತಿಸಿದರು. ಭಾಗವಹಿಸಿದ್ದ ರೈತರಿಗೆ ತಲಾ 1 ಕೆ.ಜಿ. ಮಣ್ಣಿನ ಸೂಕ್ಷ್ಮಜೀವಿ ಸಂಯೋಜನೆ ಕಿಟ್ ವಿತರಿಸಲಾಯಿತು.

ಸಮತೋಲಿತ ಗೊಬ್ಬರ ಬಳಕೆ ಮಾಹಿತಿ

ಕೃಷಿ ವಿಜ್ಞಾನಿ ಡಾ.ದಿವಾಕರ್.ವೈ, ಮಣ್ಣಿನ ಆರೋಗ್ಯ ನಿರ್ವಹಣೆ, ಸಮತೋಲಿತ ಗೊಬ್ಬರ ಬಳಕೆ ಹಾಗೂ ಮಣ್ಣಿನ ಸೂಕ್ಷ್ಮ ಜೀವಿ ಸಂಯೋಜನೆ ಬಳಕೆ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ಸೂಕ್ಷ್ಮಜೀವಿ ಸಂಯೋಜನೆ ಬಳಸುವ ವಿಧಾನದಿಂದ ಮಣ್ಣಿನ ಜೀವಂತಿಕೆ ಹೆಚ್ಚಳಗೊಳ್ಳುವ ಹಾಗೂ ಬೆಳೆ ಉತ್ಪಾದಕತೆಯಲ್ಲಿ ನೆರವಾಗುವ ಬಗ್ಗೆ ವಿವರಿಸಿದರು. ಜತೆಗೆ ರೈತರಿಗೆ ಜೀವಾಮೃತ ತಯಾರಿಸುವ ಪ್ರಾಯೋಗಿಕ ಪ್ರದರ್ಶನ ನೀಡಿ, ನೈಸರ್ಗಿಕ ಕೃಷಿ ಪದ್ಧತಿಗಳ ಮಹತ್ವ ತಿಳಿಸಿದರು.