ಉಡುಪಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಸ್ವಸಹಾಯ ಸಂಘದ ಮೂಲಕ ಮಹಿಳಾ ಸಬಲೀಕರಣ, ಮದ್ಯವರ್ಜನ ಶಿಬಿರದ ಮೂಲಕ ಜನರನ್ನು ಕುಡಿತದ ಚಟದಿಂದ ಮುಕ್ತರನ್ನಾಗಿಸಿ ಆ ಕುಟುಂದಲ್ಲಿ ಸಂತಸದ ವಾತಾವರಣ ನಿರ್ಮಿಸುತ್ತಿದ್ದಾರೆ. ಸರ್ಕಾರ ಮಾಡಬಹುದಾದ ಕಾರ್ಯವನ್ನು ಅವರು ನೆರವೇರಿಸುತ್ತಿದ್ದು, ಆ ಪುಣ್ಯಕ್ಷೇತ್ರದಿಂದ ನೂತನ, ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂದು ಶಾಸಕ ಯಶ್ಪಾಲ್ ಸುವರ್ಣ ಆಶಯ ವ್ಯಕ್ತಪಡಿಸಿದರು.
ಉಡುಪಿ ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಉಡುಪಿ ಹಾಗೂ ಕಾಪು ತಾಲೂಕು ವತಿಯಿಂದ ಗಾಂಧಿ ಜಯಂತಿಯ ನಿಮಿತ್ತ ಶನಿವಾರ (ಅ.3) ಆಯೋಜಿಸಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ಜಾಥಾ ಹಾಗೂ ಗಾಂಧಿ ಸ್ಮೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಾಜಿ ಸಂಘಟನಾ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಪಾನಮುಕ್ತರಾದ ಕುಟುಂಬದ ಪರವಾಗಿ ಜಯಂತಿ ಉಪೇಂದ್ರ, ರಾಘ ಪಾನರ್ ಹಿರಿಯಡ್ಕ, ಸುಜಲಾ ರಾಜೇಂದ್ರ ಮಾತನಾಡಿದರು. ವೀಳ್ಯ-ತಾಂಬೂಲ ಪ್ರದಾನದ ಮೂಲಕ ಅಧಿಕಾರ ಹಸ್ತಾಂತರ ಹಾಗೂ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಕುಡಿತದ ಚಟ ತ್ಯಜಿಸಿದ ಅನೇಕರಿಗೆ ಗುಲಾಬಿ ಹೂ ನೀಡಿ, ಶಾಲು ಹಾಕಿ ಅಭಿನಂದಿಸಲಾಯಿತು.
ಉಡುಪಿ ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಸತ್ಯಾನಂದ ನಾಯಕ್, ಕಾಪು ತಾಲೂಕು ಮಾಜಿ ಅಧ್ಯಕ್ಷ ದಯಾನಂದ್ ಹೆಜಮಾಡಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮಾಧವ್ ಬನ್ನಂಜೆ, ಉಡುಪಿ ತಾಲೂಕು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸುಂದರ್ ಜಿ. ಕಲ್ಮಾಡಿ, ಕಾಪು ತಾಲೂಕು ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕಾಪು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸತ್ಯೇಂದ್ರ ಪೈ, ಸುಬ್ರಹ್ಮಣ್ಯ ಶೆಟ್ಟಿ, ದಿನೇಶ್ ಆಚಾರ್ಯ, ಹರೀಶ್ ಕೋಟ್ಯಾನ್, ಶಿವಕುಮಾರ್ ಅಂಬಲಪಾಡಿ ಇತರರು ಉಪಸ್ಥಿತರಿದ್ದರು.
ನೇತ್ರಾವತಿ ಪ್ರಾರ್ಥಿಸಿದರು. ಉಡುಪಿ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯ್ಕ್ ಸ್ವಾಗತಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ನವೀನ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಪು ತಾಲೂಕು ಕ್ಷೇತ್ರ ಯೋಜನಾಧಿಕಾರಿ ಮಮತಾ ಶೆಟ್ಟಿ ವಂದಿಸಿದರು. ಬಾಲಚಂದ್ರ ಟಿ.ಆರ್. ಹಾಗೂ ಪ್ರೇಮಾ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ 9:30ಕ್ಕೆ ಬ್ರಹ್ಮಗಿರಿ ಸರ್ಕಲ್ ಬಳಿ ಆಯೋಜಿಸಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜಾಗೃತಿ ಜಾಥಾಕ್ಕೆ ಅಂಬಲಪಾಡಿಯ ಜನಾರ್ದನ, ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬಿ. ವಿಜಯ್ ಬಲ್ಲಾಳ ಚಾಲನೆ ನೀಡಿದರು. ಸಂಘದ ನೂರಾರು ಕಾರ್ಯಕರ್ತರು, ಪದಾಧಿಕಾರಿಗಳು ಮೆರವಣಿಗೆ ಮೂಲಕ ಕುಡಿತದ ಚಟ ಬಿಡುವಂತೆ ಜಾಗೃತಿ ಮೂಡಿಸಿದರು.
ಕುಡಿತದಂತಹ ಮಹಾದುಶ್ಚಟಕ್ಕೆ ಬಲಿಯಾದ ಸಾವಿರಾರು ಜನರಿಗೆ ಪುನರ್ಜೀವನ ನೀಡಿದ ಪುಣ್ಯದ ಕಾರ್ಯ ಧರ್ಮಸ್ಥಳದ ಧಮಾರ್ಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾಡುತ್ತಿದ್ದಾರೆ. ಅವರ ಪರಿಕಲ್ಪನೆಯ ಮದ್ಯವರ್ಜನದಂತಹ ವಿಶಿಷ್ಟ ಕಾರ್ಯಕ್ರಮ ದೇಶದಲ್ಲಿ ಬೇರೆಲ್ಲೂ ನಡೆಯುವುದಿಲ್ಲ. ಮೊದಲು ಮದ್ಯ ಸೇವನೆ ಮಾಡುತ್ತಾರೆ. ಬಳಿಕ ಮದ್ಯವೇ ಅವರನ್ನು ಸೇವಿಸುತ್ತದೆ. ಅದರಿಂದ ಸಮಾಜದಲ್ಲಿ ಗೌರವ, ವ್ಯಕ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಪೂಜ್ಯ ಕಾವಂದರು ಗಾಂಧೀಜಿಯವರ ಆಶಯದ ವ್ಯಸನಮುಕ್ತ ಸಮಾಜ ಸಾಕಾರಗೊಳಿಸುತ್ತಿದ್ದಾರೆ.ವಿನಯಕುಮಾರ್ ಸೊರಕೆ. ಮಾಜಿ ಸಚಿವ.