Cheetha  
ಉಡುಪಿ

ಮಚ್ಚಿನದಲ್ಲಿ ಚಿರತೆ ಓಡಾಟ

ಇಂದಿರಾ ಎನ್ ಕೆ

ಬೆಳ್ತಂಗಡಿ: ಮಚ್ಚಿನ ಗ್ರಾಮದ ಬಳ್ಳಮಂಜ, ಪುಂಚ ಪಾದೆ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಜನನಿಬಿಡ ಪ್ರದೇಶದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಟ ಕಂಡುಬರುತ್ತಿದೆ ಎಂಬ ಮಾಹಿತಿ ಇತ್ತು. ಇದೀಗ ಚಿರತೆಯ ಚಲನವಲನದ ದೃಶ್ಯ ಸೆರೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಸಂಜೆಯಾದ ಬಳಿಕ ಒಂಟಿಯಾಗಿ ಸಂಚರಿಸಲು ಜನರು ಹಿಂದೇಟು ಹಾಕುವಂತಾಗಿದೆ. ಕೃಷಿ ಚಟುವಟಿಕೆಗಳಿಗೆ ತೆರಳುವವರು ಹಾಗೂ ಜಾನುವಾರು ಸಾಕುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತಾಗಿದೆ.

ಹುಲಿ ಬಂದ ವದಂತಿ

ಇದರ ನಡುವೆ ಪರಿಸರದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಿಂದ ಜನರಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ. ಆದರೆ ಅರಣ್ಯ ಇಲಾಖೆ ಈ ಭಾಗದಲ್ಲಿ ಹುಲಿ ಓಡಾಟ ಇರುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಈ ಪರಿಸರದಲ್ಲಿ ಈ ಹಿಂದೆಯೂ ಚಿರತೆ ಓಡಾಟದ ಕುರಿತು ಮಾಹಿತಿ ಲಭಿಸಿತ್ತು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಹಲವು ಪ್ರದೇಶಗಳಲ್ಲಿ ಚಿರತೆ ಕಾಟ

ಬೆಳ್ತಂಗಡಿ ತಾಲೂಕಿನ ಹಲವು ಭಾಗಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಚಿರತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಜನವರಿಯಿಂದ ಚಾರ್ಮಾಡಿ ಘಾಟಿ, ನೆರಿಯ, ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ನಡ, ಬೆಳ್ತಂಗಡಿ ನಗರ, ಕನ್ಯಾಡಿ, ಪಿಲ್ಯ, ಹೊಸಪಟ್ಣ, ಪಾಲೇದು, ಬಜಿರೆ, ಪಡಂಗಡಿ, ಸವಣಾಲು, ಮೇಲಂತಬೆಟ್ಟು, ಲಾಯಿಲ, ಅಗಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿರತೆ ಓಡಾಟದ ಬಗ್ಗೆ ವರದಿಯಾಗಿದೆ.