ಅರಣ್ಯ ಇಲಾಖೆ ಬೋನಿನಲ್ಲಿ ಸೆರೆಯಾದ ಚಿರತೆ. 
ಉಡುಪಿ

ಅಚ್ಲಾಡಿಯಲ್ಲಿ ಚಿರತೆ ಸೆರೆ, ಗ್ರಾಮಸ್ಥರ ಆತಂಕಕ್ಕೆ ಕೊನೆ

ಕೋಟ: ಅಚ್ಲಾಡಿ ಗ್ರಾಮದ ಗರಿಕೆ ಮಠ ಸುತ್ತಮುತ್ತ ಕಳೆದ ಹಲವು ತಿಂಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಅರಣ್ಯ ಇಲಾಖೆ ಬೋನಿನಲ್ಲಿ ಮಂಗಳವಾರ ಮುಂಜಾನೆ ಸೆರೆಯಾಗಿದೆ.
ಇಲ್ಲಿನ ಹಲವಾರು ಸಾಕು ನಾಯಿಗಳು ಚಿರತೆಗೆ ಆಹಾರವಾಗಿದ್ದು, ಚಿರತೆಯ ನಿರಂತರ ಓಡಾಟದಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ರಾತ್ರಿ ವೇಳೆ ಮನೆಯಿಂದ ಹೊರಬರಲು ಹೆದರುತ್ತಿದ್ದರು. ಚಿರತೆ ಉಪಟಳಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಗರಿಕೆ ಮಠದ ಹರೀಶ್ ಶೆಟ್ಟಿ ಅವರ ತೋಟದಲ್ಲಿ ಒಂದು ವಾರದ ಹಿಂದೆ ಬೋನ್ ಇರಿಸಲಾಗಿತ್ತು. ಸೆರೆ ಸಿಕ್ಕಿರುವುದು ನಾಲ್ಕರಿಂದ ಐದು ವರ್ಷದ ಗಂಡು ಚಿರತೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಚಿರತೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ, ಅದನ್ನು ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ.
ಇದೇ ಪ್ರದೇಶದಲ್ಲಿ ಇನ್ನೂ ಎರಡು ಅಥವಾ ಮೂರು ಚಿರತೆ ಮರಿಗಳು ಓಡಾಡುತ್ತಿರುವುದನ್ನು ಸ್ಥಳೀಯರು ಕಂಡಿರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆ ಮುಂದಿನ ಕ್ರಮಗಳ ಕುರಿತು ಗಮನ ಹರಿಸಿದೆ.