ಕೊರಗ ಸಮುದಾಯದ ಯುವ ಜನತೆಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಉಡುಪಿ ಡಿಸಿ ಕಚೇರಿಯ ಬಳಿ ಕೊರಗ ಸಮುದಾಯದವರು 20ನೇ ದಿನ ಧರಣಿ ಮುಂದುವರಿಸಿದರು. ಸುಶೀಲಾ ನಾಡ, ದಿವ್ಯಾ, ಕೆ. ಪುತ್ರನ್ ಹೆಬ್ರಿ, ಸಂಜೀವ್ ಬಿ., ಶೇಖರ್, ದಿನಕರ್ ಕೆಂಜೂರು, ದೀಪಾ, ಪ್ರವೀಣ್ ಇತರರಿದ್ದರು.
* ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಆಗ್ರಹ
* ಡಿಸಿ ಕಚೇರಿ ಬಳಿ 21ನೇ ದಿನಕ್ಕೆ ಕಾಲಿಟ್ಟ ಧರಣಿ
ಉಡುಪಿ: ಸಮಾಜದಲ್ಲಿ ಅತಿ ಹಿಂದುಳಿದ ದುರ್ಬಲ, ಅಸಹಾಯಕ ಹಾಗೂ ಅಂಚಿಗೆ ತಳ್ಳಲ್ಪಟ್ಟ ಕೊರಗ ಸಮುದಾಯದ ಯುವಜನತೆಗೆ ಕಾನೂನಾತ್ಮಕವಾಗಿಯೇ ಸರ್ಕಾರಿ ನೌಕರಿ ಕೊಡಲು ಅವಕಾಶವಿದ್ದು, ಕೊರಗ ಸಮುದಾಯಕ್ಕೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡಬೇಕು. ನಮ್ಮನರಿಗೆ ಉದ್ಯೋಗ ಕೊಡುವವರೆಗೂ ಅನಿರ್ದಿಷ್ಟ ಧರಣಿ ಮುಂದುವರಿಯುತ್ತದೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ ಸಮಿತಿಯ ಅಧ್ಯಕ್ಷೆ ಸುಶೀಲಾ ನಾಡ ತಿಳಿಸಿದರು.
ಕೊರಗ ಯುವ ಸಮುದಾಯದ ಯುವ ಜನರಿಗೆ ಸರ್ಕಾರಿ ಉದ್ಯೋಗಕ್ಕೆ ಒತ್ತಾಯಿಸಿ ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಒಕ್ಕೂಟದ ವತಿಯಿಂದ ನಡೆಸುತ್ತಿರುವ ನಿರಂತರ ಅಹೋರಾತ್ರಿ ಧರಣಿಯ 20ನೇ ದಿನವಾದ ಶನಿವಾರ (ಜ.3) ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗಮನ ನೀಡದ ಸರ್ಕಾರ
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಉಡುಪಿಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದೆವು. ಆದರೆ, ಸದನದಲ್ಲಿ ಕೊರಗ ಸಮುದಾಯದವರಿಗೆ ಸರ್ಕಾರಿ ಉದ್ಯೋಗ ನೀಡುವ ಕುರಿತು ಚರ್ಚೆಯೇ ನಡೆದಿಲ್ಲ. ಅರಣ್ಯಮೂಲ ಬುಡಕಟ್ಟು ಸಮುದಾಯದವರಿಗೆ ಉದ್ಯೋಗ ಕೊಡುವುದಾಗಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದು ಜಾರಿಯಾಗಿಲ್ಲ. ಎಸ್ಟಿ ಸಮುದಾಯದ ಬಲಾಢ್ಯರು ಉದ್ಯೋಗಾವಕಾಶ ಪಡೆಯುತ್ತಿದ್ದಾರೆ. ಪಿವಿಟಿ ಗ್ರೂಪ್ ನಲ್ಲಿರುವ ಕೊರಗ ಸಮುದಾಯದವರಿಗೆ ಕಾನೂನಾತ್ಮಕವಾಗಿ ಉದ್ಯೋಗಾವಕಾಶ ನೀಡಲು ಸಾಧ್ಯತೆ ಇದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಕೊರಗರಲ್ಲಿದ್ದಾರೆ ಸುಶಿಕ್ಷಿತರು
ಕೊರಗ ಸಮುದಾಯದ ಯುವಜನರು ಇದೀಗ ಎಂಬಿಎ, ಎಂಕಾಂ, ಬಿಕಾಂ, ಎಂಎಸ್ಡಬ್ಲ್ಯೂ, ಎಂಎ ಇಂಗ್ಲಿಷ್ ಸೇರಿದಂತೆ ವಿವಿಧ ಪದವಿ ಗಳಿಸಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅವರು ಉದ್ಯೋಗಾವಕಾಶದ ಸಂದರ್ಭದಲ್ಲಿ ಕೊರಗ ಸಮುದಾಯಕ್ಕೆ ಪ್ರಥಮ ಆದ್ಯತೆ ನೀಡುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದರು. ಉಡುಪಿಯಲ್ಲಿ 36 ಇಲಾಖೆಗಳಿದ್ದು, ಈಗಾಗಲೇ 600ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿದ್ದಾರೆ. ಆದರೆ, ಕೊರಗರಿಗೆ ಒಂದೇ ಒಂದು ಉದ್ಯೋಗ ನೀಡಿಲ್ಲ. ಇದು ನಮ್ಮ ಸಮುದಾಯದ ಕಡೆಗಣನೆಗೆ ಉತ್ತಮ ಉದಾಹರಣೆ ಎಂದು ಸುಶೀಲಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಕೆ. ಪುತ್ರನ್ ಹೆಬ್ರಿ, ಸಂಜೀವ್ ಬಿ., ಶೇಖರ್, ದಿನಕರ್ ಕೆಂಜೂರು, ದೀಪಾ, ಪ್ರವೀಣ್ ಇತರರಿದ್ದರು.
ರಾಷ್ಟ್ರಪತಿಯಿಂದಲೂ ಸರ್ಕಾರಕ್ಕೆ ಸೂಚನೆ
ಕಳೆದ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರಗರಿಗೆ ಉದ್ಯೋಗ ಭದ್ರತೆ ನೀಡುವಂತೆ ಮನವಿ ನೀಡಿದ್ದೆವು. ಅದಕ್ಕೆ ಸ್ಪಂದಿಸಿದ್ದ ರಾಷ್ಟ್ರಪತಿಗಳು, ಕೊರಗರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆಯನ್ನೂ ನೀಡಿದ್ದರು. ತದನಂತರ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸೇರಿದಂತೆ ಸಚಿವರು, ಶಾಸಕರು ನಮ್ಮನ್ನು ಭೇಟಿಯಾಗಿ ಕೊರಗರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಅದರಿಂದ ಹೋರಾಟ ಕೈಬಿಟ್ಟಿದ್ದೆವು. ಬಳಿಕ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಅವರು ನಮ್ಮನ್ನು ಸಿಎಂ ಸಿದ್ದರಾಮಯ್ಯ ಅವರಲ್ಲಿಗೆ ಕರೆದುಕೊಂಡು ಹೋಗಿ, ಕೊರಗ ಸಮುದಾಯಕ್ಕೆ ಉದ್ಯೋಗ ನೀಡುವಂತೆ ನಮ್ಮ ಪರವಾಗಿ ಮತ್ತೊಮ್ಮೆ ವಿನಂತಿಸಿದ್ದರು. ಆದರೆ, ಈವರೆಗೂ ಉದ್ಯೋಗ ಭದ್ರತೆ ಲಭಿಸಿಲ್ಲ. ಅನಗತ್ಯವಾಗಿ ಸರ್ಕಾರ ವಿಳಂಬ ಮಾಡುತ್ತಿದೆ. ಉದ್ಯೋಗ ನೀಡುವವರೆಗೂ ಧರಣಿ ಮುಂದುವರಿಸುತ್ತೇವೆ ಎಂದರು.
ನಮಗೆ ಉದ್ಯೋಗಾವಕಾಶ ನೀಡಲು ಅನುಭವ (ಎಕ್ಸ್ಪೀರಿಯನ್ಸ್) ಕೇಳುತ್ತಾರೆ. ಆದರೆ, ಕೊರಗರಿಗೆ ಉದ್ಯೋಗವನ್ನೇ ನೀಡದೆ ಅನುಭವ ಬೇಕು ಎಂದರೆ ನಾವೇನು ಮಾಡೋದು? ಪೌರಕಾರ್ಮಿಕರ ಕೆಲಸಕ್ಕೆ ಮಾತ್ರ ಅವಕಾಶ ನೀಡುತ್ತಾರೆ. ಎಂಕಾಂ, ಎಂಬಿಎ, ಎಂಎ ಶಿಕ್ಷಣ ಮುಗಿಸಿದ ನಮಗೆ ಕಸ ಹೆಕ್ಕುವ ಕೆಲಸಕ್ಕೆ ಸೀಮಿತ ಮಾಡುತ್ತಿದ್ದಾರೆ. ಸರ್ಕಾರಿ ಉದ್ಯೋಗಕ್ಕೆ ಸೇರಲು ಇರುವ ನಮ್ಮವಯಸ್ಸೂ ಸಹ ಮುಗಿಯುತ್ತಿದೆ. ಹಲವರಿಗೆ ವಯಸ್ಸು ದಾಟಿದ್ದು ಇನ್ನು ಸರ್ಕಾರಿ ನೌಕರಿ ಸಿಗದು.