ಉಡುಪಿ ನಿಟ್ಟೂರಿನ ಸೈಲಸ್​ ಪಿಯು ಕಾಲೇಜ್​ನಲ್ಲಿ ಆಯೋಜಿಸಿದ್ದ ಕಾನೂನು ಅರಿವು&ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ನಿತಿನ್​ ವೈ. ರಾವ್​ ಮಾತನಾಡಿದರು. ಶಾರ್ಲೆಟ್​ ಮೇಘನಾ ಮಾಬೆನ್​, ತಿಲೋತ್ತಮಾ ನಾಯಕ್​, ಡಾ. ಜಾರ್ಜ್​ ಇದ್ದರು. 
ಉಡುಪಿ

ದೌರ್ಜನ್ಯ, ಲೈಂಗಿಕ ಕಿರುಕುಳ ನಡೆದರೆ ನೀಡಿ ಮಾಹಿತಿ

* ಮಕ್ಕಳಿಗೆ ನ್ಯಾಯಾಧೀಶ ನಿತಿನ್​ ವೈ. ರಾವ್​ ಸಲಹೆ

* ಕಾಲೇಜ್​ ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು 

ಉಡುಪಿ: ಯಾರಿಂದಲಾದರೂ ಯಾವುದೇ ರೀತಿಯ ದೌರ್ಜನ್ಯ ಅಥವಾ ಲೈಂಗಿಕ ಕಿರುಕುಳ ನಡೆದರೆ ಮಕ್ಕಳು ಮತ್ತು ಪಾಲಕರು ಅಧೀರರಾಗಬಾರದು. ಧೈರ್ಯದಿಂದ ಶಿಕ್ಷಕರು ಅಥವಾ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತರಬೇಕು. ಸೈಬರ್​ ವಂಚನೆ ಹೆಚ್ಚುತ್ತಿರುವುದರಿಂದ ಸಾಮಾಜಿಕ ಜಾಲತಾಣ ಮತ್ತು ಡಿಜಿಟಲ್​ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಬಳಸಬೇಕು ಎಂದು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್​ ನ್ಯಾಯಾಧೀಶ ನಿತಿನ್​ ವೈ. ರಾವ್​ ತಿಳಿಸಿದರು. 
ನಿಟ್ಟೂರಿನ ಸೈಲಸ್​ ಪಿಯು ಕಾಲೇಜ್​ನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ವತಿಯಿಂದ ಬುಧವಾರ (ಜು.8) ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೇಡ ದುಶ್ಚಟ

ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ಮಾಹಿತಿ, ಬ್ಯಾಂಕ್​ ಖಾತೆಯ ವಿವರ, ಪಾಸ್​ವರ್ಡ್​ ಹಾಗೂ ಒಟಿಪಿ ಮಾಹಿತಿ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬಾರದು. ಸೈಬರ್​ ವಂಚನೆ, ಆನ್​ಲೈನ್​ ಕಿರುಕುಳ, ನಕಲಿ ಲಿಂಕ್​ ಹಾಗೂ ಡಿಜಿಟಲ್​ ಮೋಸಗಳಿಂದ ಎಚ್ಚರಿಕೆಯಿಂದ ಇರಬೇಕು. ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ, ಮಾನಸಿಕ ಸ್ಥಿತಿ, ಶಿಕ್ಷಣ, ಕುಟುಂಬ ಹಾಗೂ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಉತ್ತಮ ಸ್ನೇಹಬಳಗ ಹೊಂದಿರಬೇಕು. ಶಿಸ್ತುಬದ್ಧ ಹಾಗೂ ಮೌಲ್ಯಯುತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕ್ರಿಸ್ಟಲ್​ ಎಜುಕೇಷನಲ್​ ಟ್ರಸ್ಟ್​ನ ಟ್ರಸ್ಟಿ ಶಾರ್ಲೆಟ್​ ಮೇಘನಾ ಮಾಬೆನ್​ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಲ್​ವಿ ತಿಲೋತ್ತಮಾ ನಾಯಕ್​, ಸೈಲಸ್​ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಜಾರ್ಜ್​, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಗೆ ಸರಿ-ತಪ್ಪುಗಳ ಅರಿವು

ಪೋಕ್ಸೋ ಕಾಯ್ದೆಯ ಮಹತ್ವ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಮಕ್ಕಳ ಹಕ್ಕುಗಳು, ವೈಯಕ್ತಿಕ ಸುರಕ್ಷತೆ, ಉತ್ತಮ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಕುರಿತು ವಿದ್ಯಾರ್ಥಿಗಳಿಗೆ ನ್ಯಾ. ನಿತಿನ್​ ವೈ. ರಾವ್​ ಮಾಹಿತಿ ನೀಡಿದರು. ಪೋಕ್ಸೋ ಕಾಯ್ದೆಯಡಿ ಮಕ್ಕಳ ರಕ್ಷಣೆಗಾಗಿ ಸರ್ಕಾರ ಒದಗಿಸಿರುವ ಕಾನೂನು ಸೌಲಭ್ಯ ಹಾಗೂ ಅಪರಾಧಿಗಳಿಗೆ ವಿಧಿಸಲಾಗುವ ಕಠಿಣ ಶಿಕ್ಷೆಗಳ ಕುರಿತು ಅರಿವು ಮೂಡಿಸಿದರು. ಮಾದಕ ವಸ್ತುಗಳ ಬಳಕೆ ಮತ್ತು ಸಾಗಾಟಕ್ಕೆ ಇರುವ ಶಿಕ್ಷೆ ಹಾಗೂ ಸಂಬಂಧಿತ ಕಾನೂನು ಕ್ರಮಗಳ ಬಗ್ಗೆ ವಿವರಿಸಿದರು.