ತೆಕ್ಕಟ್ಟೆಯಲ್ಲಿ ನಡೆದ ಯಶಸ್ವಿ ಕಲಾವೃಂದದ ವಾರ್ಷಿಕೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ತಲ್ಲೂರು ಶಿವರಾಂ ಶೆಟ್ಟಿ, ಆನಂದ್​ ಸಿ. ಕುಂದರ್​, ಮುರಳಿ ಕಡೆಕಾರ್​, ಮಲ್ಯಾಡಿ ಸೀತಾರಾಮ ಶೆಟ್ಟಿ, ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್​ ಶೆಟ್ಟಿ, ಕೃಷ್ಣಯ್ಯ ಆಚಾರ್​ ಬಿದ್ಕಲ್​ಕಟ್ಟೆ, ದೇವದಾಸ್​ ರಾವ್​ ಕೂಡ್ಲಿ, ಗೋಪಾಲ ಪೂಜಾರಿ ಇತರರಿದ್ದರು. 
ಉಡುಪಿ

ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಸಂಸ್ಕಾರ

ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಅಭಿಪ್ರಾಯ
ಯಶಸ್ವಿ ಕಲಾವೃಂದದ ವಾರ್ಷಿಕೋತ್ಸವ, ರಂಗಾರ್ಪಣ 

ಉಡುಪಿ: ತೆಕ್ಕಟ್ಟೆಯ ಯಶಸ್ವಿ ಕಲಾವೃಂದವು ಯಕ್ಷಗಾನಕ್ಕೆ ತನ್ನದೇ ಆದ ವಿಶಿಷ್ಟ ಸೇವೆ ನೀಡುವ ಮೂಲಕ ಕಲಾರಸಿಕರ ಮನ ಗೆದ್ದಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿರುವುದು ಸಂತಸ ತಂದಿದೆ. ಯಕ್ಷಗಾನ ಅಕಾಡೆಮಿಯು ಮಕ್ಕಳಿಗೆ ಯಕ್ಷ ಶಿಕ್ಷಣ ಕೊಡಿಸಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ಕಲೆಯ ಮೂಲಕ ಮಕ್ಕಳಲ್ಲಿ ಸಂಸ್ಕಾರ ತುಂಬಿಸುವ ಕಾರ್ಯ ಅತ್ಯಂತ ಸುಲಭ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಂ ಶೆಟ್ಟಿ ಅಭಿಪ್ರಾಯಪಟ್ಟರು.
ಕುಂದಾಪುರದ ತೆಕ್ಕಟ್ಟೆಯ ಹಯಗ್ರೀವ ಸಭಾಂಗಣದಲ್ಲಿ ಆಯೋಜಿಸಿದ್ದ ಯಶಸ್ವಿ ಕಲಾವೃಂದದ ವಾರ್ಷಿಕೋತ್ಸವ, ರಂಗಾರ್ಪಣ ಹಾಗೂ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಕಲೆಗೆ ಹೆಚ್ಚಿದ ಪ್ರೋತ್ಸಾಹ

ಯಕ್ಷಗಾನ ಕಲೆಗೆ ಪ್ರೋತ್ಸಾಹ ಹೆಚ್ಚುತ್ತಿರುವುದು ಸಂತಸ ವಿಚಾರ. ಕೋಟದ ಉದ್ಯಮಿ ಆನಂದ್​ ಸಿ. ಕುಂದರ್​ ಅವರು ಕಲಾವೃಂದವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ. ಹಿಂದೆ ರಾಜಾಶ್ರಯದಲ್ಲಿ ಮೆರೆದಿದ್ದ ಯಕ್ಷಗಾನ ಇಂದು ದೇವಳಗಳು ಹಾಗೂ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿದ್ದು, ಯಕ್ಷಗಾನದ ಪಡುವಲಪಾಯ ತನ್ನ ಭವಿಷ್ಯ ಭದ್ರವಾಗಿಸಿಕೊಂಡಿದೆ ಎಂದು ಡಾ. ತಲ್ಲೂರು ತಿಳಿಸಿದರು.

ಸಾಮಾಜಿಕ ಮಾನ್ಯತೆ

ಗೀತಾನಂದ ಫೌಂಡೇಷನ್​ನ ಪ್ರವರ್ತಕ ಆನಂದ್​ ಸಿ. ಕುಂದರ್​ ಮಾತನಾಡಿ, ಎಲ್ಲ ಕಲೆಗಳನ್ನು ಕರಗತ ಮಾಡಿಕೊಂಡು ನಿರಂತರವಾಗಿ ಬೆಳೆಸುತ್ತ ಉತ್ತುಂಗಕ್ಕೇರಿದ ಸಂಸ್ಥೆಗಳಿಗೆ ಸಾಮಾಜಿಕವಾಗಿ ಮಾನ್ಯತೆ ದೊರೆಯಬೇಕು ಎಂದರು.
ಯಶಸ್ವಿ ಕಲಾವೃಂದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಸುಜಯ್​ ಶೆಟ್ಟಿ, ಕೃಷ್ಣಯ್ಯ ಆಚಾರ್​ ಬಿದ್ಕಲ್​ಕಟ್ಟೆ, ದೇವದಾಸ್​ ರಾವ್​ ಕೂಡ್ಲಿ, ಗೋಪಾಲ ಪೂಜಾರಿ, ಲಂಬೋದರ ಹೆಗಡೆ, ವೆಂಕಟೇಶ ವೈದ್ಯ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೆರಿಯ ಮಾಸ್ಟರ್​ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಆಚಾರ್​, ಪಂಚಮಿ ವೈದ್ಯ, ಪವನ್​ ಆಚಾರ್​, ಕಿಶನ್​ ಪೂಜಾರಿ, ಹರ್ಷಿತಾ ಅಮೀನ್​ ಸ್ವಾಗತ ಗಾಯನ, ಅಭಿನಂದನಾ ಗಾಯನ, ಧನ್ಯವಾದ ಗಾಯನ ಮಾಡಿದರು.

ವಿವಿಧ ಸಾಧಕರಿಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಕೋಟ ಸುರೇಶ್​ ಬಂಗೇರ ಮತ್ತು ಐರ್​ಬೈಲ್​ ಆನಂದ ಶೆಟ್ಟಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪತ್ರಕರ್ತ ಲಕ್ಷ್ಮೀ ಮಚ್ಚಿನ, ಸಮಾಜ ಸೇವಕ ಸತೀಶ್​ ಪೂಜಾರಿ, ಕ್ರೀಡಾಪಟು ಸುದೀಪ್​ ಶೆಟ್ಟಿ ಮಲ್ಯಾಡಿ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಶಿವರಾಮ ಕಾರಂತ ಬಾಲ ಪುರಸ್ಕಾರ ಗಳಿಸಿದ ಹರ್ಷಿತಾ ಅಮೀನ್​ ಅವರನ್ನೂ ಗೌರವಿಸಲಾಯಿತು.
"

ಯಶಸ್ವಿ ಕಲಾವೃಂದವು ಯಕ್ಷಗಾನವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬೆಳೆಯುತ್ತಿರುವ ಸಂಸ್ಥೆಯಾಗಿದೆ. ಇತ್ತೀಚೆಗೆ ಯಕ್ಷಗಾನಕ್ಕೆ ದೊರೆಯುತ್ತಿರುವ ಪ್ರೋತ್ಸಾಹ ಇನ್ನಾವುದೇ ಕಲೆಗೂ ಸಿಗುತ್ತಿಲ್ಲ. ಅದರಿಂದ ಯಕ್ಷಗಾನ ಕಲೆಗೆ ಅಳಿವಿಲ್ಲ ಎಂಬುದು ಸತ್ಯ. ಯಕ್ಷಗಾನಕ್ಕೆ ಈ ಭಾಗದಲ್ಲಿ ಯಶಸ್ವಿ ಕಲಾವೃಂದ ಬಹು ದೊಡ್ಡ ಕೊಡುಗೆ ನೀಡಿದೆ.